ಆಟೋ ಚಾಲಕರು, ಪ್ರಯಾಣಿಕರಿಗೆ ನೆಮ್ಮದಿ: ಹೊಸಂಗಡಿಯಲ್ಲಿ ಆಧುನಿಕ ಆಟೋ ನಿಲ್ದಾಣ ನಿರ್ಮಾಣ

ವರ್ಷಗಳ ಬೇಡಿಕೆಗೆ ಸ್ಪಂದನೆ; ಚಾಲಕರ ಒಗ್ಗಟ್ಟು ಹಾಗೂ ಶಾಸಕರ ಅಭಿವೃದ್ಧಿ ನಿಧಿಯಿಂದ ಕನಸು ನನಸು

ಹೊಸಂಗಡಿ: ಹಲವು ವರ್ಷಗಳಿಂದ ಸೂಕ್ತ ಆಟೋ ನಿಲ್ದಾಣದ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಹೊಸಂಗಡಿಯ ಆಟೋರಿಕ್ಷಾ ಚಾಲಕರಿಗೆ ಇದೀಗ ನೆಮ್ಮದಿ ದೊರೆತಿದೆ. ಆಧುನಿಕ ಸೌಲಭ್ಯಗಳೊಂದಿಗೆ ನೂತನ ಆಟೋ ನಿಲ್ದಾಣ ನಿರ್ಮಾಣಗೊಂಡಿದ್ದು,ಚಾಲಕರು ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ. ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ ಇಲ್ಲದ ಕಾರಣ ಆಟೋರಿಕ್ಷಾಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ ಇತ್ತು.

ಇದರಿಂದ ಬಸ್‌ಗಳ ಬಾಗಿಲು ತೆರೆಯುವ ಸಂದರ್ಭದಲ್ಲಿ ಆಟೋರಿಕ್ಷಾಗಳಿಗೆ ಡಿಕ್ಕಿಯಾಗುವ ಘಟನೆಗಳು ಸಾಮಾನ್ಯವಾಗಿದ್ದು, ಚಾಲಕರು ಹಾಗೂ ಪ್ರಯಾಣಿಕರಿಗೆ ಸುರಕ್ಷತಾ ಆತಂಕ ಎದುರಾಗಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಬೇಡಿಕೆಗೆ ಇದೀಗ ಫಲ ಸಿಕ್ಕಿದೆ.

ಬಸ್‌ ನಿಲುಗಡೆ ತಂಗುದಾಣದ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಆಟೋ ನಿಲ್ದಾಣ ನಿರ್ಮಿಸಲಾಗಿದೆ. ಆಟೋ ಚಾಲಕರು ವಿಶ್ರಾಂತಿ ಪಡೆಯಲು ಹಾಗೂ ಪ್ರಯಾಣಿಕರು ಸುರಕ್ಷಿತವಾಗಿ ಆಟೋಗಾಗಿ ಕಾಯಲು ಅನುಕೂಲವಾಗುವ ರೀತಿಯಲ್ಲಿ ನಿಲ್ದಾಣವನ್ನು ಸಜ್ಜುಗೊಳಿಸಲಾಗಿದೆ. ಇದರಿಂದ ಸ್ಥಳೀಯ ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ.

ಹೊಸಂಗಡಿಯಲ್ಲಿ ಪ್ರಸ್ತುತ 102 ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಜಾತಿ ಹಾಗೂ ಧರ್ಮದ ಭೇದಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ್ದರ ಫಲವಾಗಿ ಬಹುಕಾಲದ ಕನಸಾಗಿದ್ದ ಆಟೋ ನಿಲ್ದಾಣ ನನಸಾಗಿದೆ. ಪ್ರತಿಯೊಬ್ಬ ಸದಸ್ಯರಿಂದ ತಲಾ ₹1,000ರಂತೆ ವಂತಿಗೆ ಸಂಗ್ರಹಿಸಲಾಗಿತ್ತು.

ಉಳಿದ ನಿರ್ಮಾಣ ಕಾಮಗಾರಿಗಳು ಹಾಗೂ ಇಂಟರ್‌ಲಾಕ್ ಅಳವಡಿಕೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ತಮ್ಮ ಅಭಿವೃದ್ಧಿ ನಿಧಿಯಿಂದ ಸುಮಾರು ₹1.75 ಲಕ್ಷ ಅನುದಾನ ನೀಡಿದ್ದರು.

ಆಟೋ ಚಾಲಕರ ಒಗ್ಗಟ್ಟು ಹಾಗೂ ಜನಪ್ರತಿನಿಧಿಯ ಬೆಂಬಲ ಒಟ್ಟಾಗಿ ಬಂದ ಪರಿಣಾಮ ಹಲವು ವರ್ಷಗಳ ಬೇಡಿಕೆಯಾಗಿದ್ದ ಆಧುನಿಕ ಆಟೋ ನಿಲ್ದಾಣ ವಾಸ್ತವವಾಗಿದೆ. ಚಾಲಕರ ಸುರಕ್ಷತೆ ಹಾಗೂ ಪ್ರಯಾಣಿಕರ ಅನುಕೂಲ ಎರಡನ್ನೂ ಖಾತರಿಪಡಿಸುವ ಈ ಯೋಜನೆ ಇತರ ಪ್ರದೇಶಗಳಿಗೂ ಮಾದರಿಯಾಗಲಿದೆ ಎಂಬ ನಿರೀಕ್ಷೆಯನ್ನು ಹೊಸಂಗಡಿಯ ಆಟೋ ಚಾಲಕರು ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಕಾರ್ಯಕ್ರಮವನ್ನು ಉದ್ಘಾಟಿಸಿದರು , ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸಯ್ಯದ್ ಸೈಫುಲ್ಲಾ ತಂಙಳ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ, ವಾರ್ಡ್ ಸದಸ್ಯ ಸಿದ್ದೀಕ್ ಕೆ.ಎ., ಸಾಮಾಜಿಕ ಕಾರ್ಯಕರ್ತೆ ಅಶ್ವಿನಿ ಎಂ.ಎಲ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

ಕಾಸರಗೋಡು ಜಿಲ್ಲಾ ಜಂಟಿ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಎಸ್‌ಟಿಯು ರಾಜ್ಯ ಕಾರ್ಯದರ್ಶಿ ಶರೀಫ್ ಕೊಡವಂಜಿ, ಎಸ್‌ಡಿಟಿಯು ಕಾಸರಗೋಡು ಜಿಲ್ಲಾ ಉಸ್ತುವಾರಿ ಇಕ್ಬಾಲ್ ಹೊಸಂಗಡಿ, ಸಾಮಾಜಿಕ ಕಾರ್ಯಕರ್ತ ಸತೀಶ್ ಅಡಪ್ಪ ಸಂಕಬೈಲ್ ಹಾಗು ಮತ್ತಿತ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!