ಸಿಯುಟಾ: ಕಳೆದ 24 ಗಂಟೆಗಳಲ್ಲಿ ಮೊರಾಕೊದಿಂದ ಸ್ಪೇನ್‌ನ ಉತ್ತರ ಆಫ್ರಿಕಾದ ಪ್ರದೇಶವಾದ ಸಿಯುಟಾಗೆ ಸುಮಾರು 60 ಸಾವಿರ ಅಕ್ರಮ ವಲಸಿಗರು ನುಸುಳಲು ಯತ್ನಿಸಿದ್ದು, ಸಮುದ್ರದಲ್ಲಿ ಈಜುವ ವೇಳೆ 34 ಮಂದಿ ಮೃತಪಟ್ಟಿದ್ದಾರೆ ಎಂದು ಸಿಯುಟಾ ಅಧ್ಯಕ್ಷ ಜುವಾನ್ ಜೀಸಸ್ ವಿವಾಸ್ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಪೇನ್ ಸರ್ಕಾರ ಸಿಯುಟಾದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ. ಗಡಿ ದಾಟುತ್ತಿರುವ ಸಾವಿರಾರು ವಲಸಿಗರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಅಕ್ರಮ ವಲಸಿಗರನ್ನು ಶೀಘ್ರವೇ ಮೊರಾಕೊಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಅಕ್ರಮ ವಲಸೆ ಪ್ರಯತ್ನಗಳು ಹೆಚ್ಚಾದ ನಂತರ ಸ್ಥಳೀಯ ಅಧಿಕಾರಿಗಳು ಸಹಾಯಕ್ಕಾಗಿ ಮ್ಯಾಡ್ರಿಡ್‌ಗೆ ಮನವಿ ಮಾಡಿದ್ದರು, ಆದರೆ ಗುರುವಾರ ಗಡಿ ನಿಯಂತ್ರಣಗಳು ಕುಸಿದಿದ್ದು, ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ.

ಗುರುವಾರದ ವೀಡಿಯೊಗಳು ಮತ್ತು ಚಿತ್ರಗಳು ಸಾವಿರಾರು ಜನರು ನಗರಕ್ಕೆ ಈಜುತ್ತಿರುವುದನ್ನು ತೋರಿಸುತ್ತವೆ. ಸ್ಪೇನ್ ಈಗ ಸಿಯುಟಾ ಮತ್ತು ಮತೊತಂದು ನಗರವಾದ ಮೆಲಿಲ್ಲಾದಲ್ಲಿ ಭದ್ರತೆಯನ್ನು ಹೆಚ್ಚಿಸಲು ತನ್ನ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ. ಅಲ್ಲಿ ರಾತ್ರಿಯಿಡೀ 300 ರಿಂದ 400 ಅಕ್ರಮ ನುಸುಳುವಿಕೆ ವರದಿಯಾಗಿವೆ.


