ಗ್ರಾಮ ಸ್ವರಾಜ್ ಪ್ರತಿಷ್ಠಾನದ ವತಿಯಿಂದ ಗ್ರಾಮೀಣ ಕ್ರೀಡಾ ಸಂಸ್ಕೃತಿಗೆ ಮತ್ತೊಂದು ಹೆಜ್ಜೆ:ಕುಳಾಲು ಸುಭಾಶ್ಚಂದ್ರ ಶೆಟ್ಟಿ ನೇತೃತ್ವದಲ್ಲಿ ಗ್ರಾಮಮಟ್ಟದ ವಾಲಿಬಾಲ್ ಪಂದ್ಯಾಟ ಯಶಸ್ವಿ

ಕೊಳ್ನಾಡು: ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಗ್ರಾಮ ಸ್ವರಾಜ್ ಪ್ರತಿಷ್ಠಾನ (ರಿ), ಮಂಗಳೂರು ಹಾಗೂ ಸೌಹಾರ್ಧ ಫ್ರೆಂಡ್ಸ್, ಕೊಳ್ನಾಡು–ಸಾಲೆತ್ತೂರು ಇವರ ಜಂಟಿ ಆಶ್ರಯದಲ್ಲಿ ಎರಡನೇ ವರ್ಷದ ಗ್ರಾಮಮಟ್ಟದ ವಾಲಿಬಾಲ್ ಪಂದ್ಯಾಟವು ಸಾಲೆತ್ತೂರು ಪೇಟೆಯ ಮೈದಾನದಲ್ಲಿ ಉತ್ಸಾಹಭರಿತವಾಗಿ ನಡೆಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷರೂ ಶಾಸಕರೂ ಆದ ಶ್ರೀ ಮಂಜುನಾಥ ಭಂಡಾರಿಯವರ ಕ್ರೀಡಾ ಮಾರ್ಗದರ್ಶನದಲ್ಲಿ ಹಾಗೂ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜಿಸಲಾದ ಈ ಪಂದ್ಯಾವಳಿಗೆ ಕ್ರೀಡಾಭಿಮಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು, “ಕ್ರೀಡೆ ಎನ್ನುವುದು ಕೇವಲ ಗೆಲುವು–ಸೋಲಿನ ಸ್ಪರ್ಧೆಯಲ್ಲ; ಅದು ಶಾಂತಿ, ಸೌಹಾರ್ದತೆ, ಆರೋಗ್ಯ ಮತ್ತು ಸಾಮಾಜಿಕ ಐಕ್ಯತೆಯನ್ನು ಬೆಳೆಸುವ ಶಕ್ತಿಯುತ ಸಾಧನವಾಗಿದೆ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಯುವಜನರನ್ನು ಆರೋಗ್ಯಕರ ಚಟುವಟಿಕೆಗಳತ್ತ ಸೆಳೆಯುವ ಇಂತಹ ಕ್ರೀಡಾಕೂಟಗಳು ಸಮಾಜದ ಸದೃಢ ಭವಿಷ್ಯ ನಿರ್ಮಾಣಕ್ಕೆ ಪೂರಕವಾಗಿವೆ. ಕಳೆದ ಎರಡು ವರ್ಷಗಳಿಂದ ಯುವ ಕಾಂಗ್ರೆಸ್ ಮುಖಂಡರಾದ ಹಪೀಝ್ ಹಾಗೂ ಶಪೀಕ್ ಅವರು ಸಂಘಟನಾ ಸಾಮರ್ಥ್ಯದಿಂದ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಇಂತಹ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು,” ಗ್ರಾಮ ಸ್ವರಾಜ್ ನಿಮ್ಮೊಂದಿಗೆ ಸಹಕಾರ ನೀಡಲಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಇಬ್ರಾಹಿಂ ನವಾಝ್, ಕೊಳ್ನಾಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅಶ್ರಫ್ ಕೆ. ಸಾಲೆತ್ತೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಂತಿಯಾಜ್ ಕಲ್ಲಡ್ಕ, ಎನ್‌ಎಸ್‌ಯುಐ ವಿದ್ಯಾರ್ಥಿ ಮುಖಂಡ ಅಕ್ಮಲ್, ಮಸೂದ್ ಕಟ್ಟೆ ಸೇರಿದಂತೆ ಹಲವಾರು ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!