ಮಂಗಳೂರು: ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ಒದಗಿಸುವ ಉದ್ದೇಶದಿಂದ ನಿರ್ಮಾಣಗೊಂಡಿರುವ ‘ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆ’ಯ ಉದ್ಘಾಟನಾ ಸಮಾರಂಭವು ಆಗಸ್ಟ್ 8ರಂದು (ಶನಿವಾರ) ಬೆಳಿಗ್ಗೆ 9.20ಕ್ಕೆ ಶಕ್ತಿನಗರದ ಸಾನಿಧ್ಯ ಶಾಲೆಯ ಆವರಣದಲ್ಲಿ ನಡೆಯಲಿದೆ.


ಶ್ರೀ ಕ್ಷೇತ್ರ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯು.ಟಿ. ಖಾದರ್ ಫರೀದ್ ಅವರು ಶಾಲೆಯನ್ನು ಉದ್ಘಾಟಿಸಲಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿವಿನಾಯಕ್ ನರವಡೆ ಕರ್ಬಾರಿ, ಐಎಎಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಈ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಾನಿಧ್ಯ ಅರ್ಜುನ್ ಶೆಟ್ಟಿ ಫೌಂಡೇಶನ್ ಇದರ ದಾನಿ ಸುಧೀರ್ ಶೆಟ್ಟಿ, ತಮ್ಮ ಪುತ್ರ ದಿವಂಗತ ಅರ್ಜುನ್ ಎಸ್. ಶೆಟ್ಟಿ ಅವರ ಸೇವಾ ಮನೋಭಾವವೇ ಈ ಸಂಸ್ಥೆಯ ನಿರ್ಮಾಣಕ್ಕೆ ಪ್ರೇರಣೆಯಾಗಿದೆ . ಬಾಲ್ಯದಿಂದಲೇ ತಮ್ಮ ಆದಾಯದ ಒಂದು ಭಾಗವನ್ನು ಸಮಾಜದ ಹಿಂದುಳಿದ ಹಾಗೂ ವಿಶೇಷ ಸಾಮರ್ಥ್ಯದ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಡಬೇಕು ಎಂಬ ಕನಸು ಅರ್ಜುನ್ ಅವರದ್ದಾಗಿತ್ತು. ಆ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ‘ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆ’ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಸಾನಿಧ್ಯ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶೇಷ ಮಕ್ಕಳ ಮೇಲಿನ ವಸಂತ್ ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿಯ ಪ್ರೀತಿ, ಕಾಳಜಿ ಮತ್ತು ಸಮರ್ಪಣಾ ಮನೋಭಾವ ತಮ್ಮ ಕುಟುಂಬವನ್ನು ಸ್ಪರ್ಶಿಸಿತ್ತು. ಅದರಿಂದಲೇ ಆಟಿಸಂ ಹಾಗೂ ವಿಶೇಷ ಸಾಮರ್ಥ್ಯದ ಮಕ್ಕಳಿಗಾಗಿ ಉತ್ತಮ ಸೌಲಭ್ಯಗಳಿರುವ ಶಾಲೆಯನ್ನು ನಿರ್ಮಿಸಲು ಮುಂದಾದೆವು ಎಂದು ಅವರು ತಿಳಿಸಿದರು.

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿ ಶಾಲೆ ಹಾಗೂ ಹಾಸ್ಟೆಲ್ ನಡುವಿನ 42 ಸೆಂಟ್ಸ್ ಜಾಗವನ್ನು ಸುಧೀರ್ ಶೆಟ್ಟಿ ಕುಟುಂಬದ ಸಹಕಾರದಿಂದ ಖರೀದಿಸಿ, ಅದರಲ್ಲಿ ಈ ನೂತನ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.
“ಬಹುದಿನಗಳ ಕನಸಾಗಿದ್ದ ಸಮಗ್ರ ಕ್ಯಾಂಪಸ್ ಇದೀಗ ಸಾಕಾರಗೊಂಡಿದೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡ ಆಧುನಿಕ ಶಿಕ್ಷಣ ಸಂಸ್ಥೆಯಾಗಿ ಸಾನಿಧ್ಯ ರೂಪುಗೊಂಡಿದೆ. ಆಗಸ್ಟ್ 8ರಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಮಕ್ಕಳ ಪೋಷಕರು, ಶಿಕ್ಷಣಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

