ಕಾಸರಗೋಡು : ಮದುವೆ ವಾರ್ಷಿಕೋತ್ಸವದ ಆಚರಣೆಗೆಂದು ಅತ್ಯಾಸೆಯಿಂದ ತಂದ ಕೇಕ್ನಲ್ಲಿ ಬಲಿತ ಫಂಗಸ್ಗಳು ಪತ್ತೆಯಾಗಿದ್ದು, ಅದನ್ನು ಸೇವಿಸಿದ ಕಂದಮ್ಮಗಳು ನಗುವಿನ ಬದಲಿಗೆ ಆಸ್ಪತ್ರೆ ಸೇರಿ ಸಾವು-ಬದುಕಿನ ನಡುವೆ ನರಳುವಂತಾಗಿಸಿರುವ ಅಮಾನವೀಯ ಘಟನೆ ಕಾಸರಗೋಡಿನ ಹೊಸದುರ್ಗ ತಾಲೂಕಿನ ಪರಪ್ಪದಲ್ಲಿ ನಡೆದಿದೆ.

ಕಿನಾನೂರ್ ಕರಿಂದಳಂ ಪಂಚಾಯತ್ ವ್ಯಾಪ್ತಿಯ ಕನಕಪಳ್ಳಿ ನಿವಾಸಿ ಸಲೀಂ ಎಂಬವರ ವಿವಾಹ ವಾರ್ಷಿಕೋತ್ಸವಕ್ಕೆ ಇಲ್ಲಿನ ಕುಖ್ಯಾತ “ಸಿಟಿ ಬೇಕರಿ”ಯಿಂದ ಖರೀದಿಸಿದ ಕೇಕ್ ಜನರ ಜೀವದೊಂದಿಗೆ ಚೆಲ್ಲಾಟವಾಡಿದೆ.

ಸಂಭ್ರಮದಿಂದ ಕೇಕ್ ಸವಿದ ತಕ್ಷಣವೇ ಹಿರಿಯರಿಗೆ ವಿಚಿತ್ರ ರುಚಿ ಅನುಭವವಾದರೆ, ಅಮಾಯಕ ಮಕ್ಕಳು ತೀವ್ರ ಅಸ್ವಸ್ಥಗೊಂಡು ನರಳಾಡಿದರು.
ತಕ್ಷಣವೇ ಎಚ್ಚೆತ್ತುಕೊಂಡು ಪರಿಶೀಲಿಸಿದಾಗ ಆ ಕೇಕ್ ಸಂಪೂರ್ಣ ಕೊಳೆತು ನಾರುತ್ತಿದ್ದು, ಅದರ ಮೇಲೆಯೇ ಹಸಿರು ಬಣ್ಣದ ಫಂಗಸ್ಗಳು ಕವಿದುಕೊಂಡಿರುವುದು ಬೆಚ್ಚಿಬೀಳಿಸುವ ಸತ್ಯವನ್ನು ಬಯಲು ಮಾಡಿತು.

ಕೂಡಲೇ ಜಾಗೃತರಾದ ಪೋಷಕರು ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಗೆ ದಾಖಲಿಸಿದ ದೂರಿನ ಆಧಾರದ ಮೇಲೆ, ಅಧಿಕಾರಿಗಳು ದಾಳಿ ನಡೆಸಿ ಬೇಕರಿಯಲ್ಲಿದ್ದ ಹಳಸಿಹೋದ ಹಾನಿಕಾರಕ ಆಹಾರ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಬೇಕರಿಗೆ ಭಾರಿ ಪ್ರಮಾಣದ ದಂಡ ವಿಧಿಸಿ, ತಕ್ಷಣವೇ ಬಂದ್ ಮಾಡಿಸಿ ಅಧಿಕಾರಿಗಳು ಕಠಿಣ ನೋಟೀಸ್ ಜಾರಿಗೊಳಿಸಿದ್ದಾರೆ.

