ಮಂಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ನಿಂದಾಗಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಾಚ್ಯ ಶಬ್ದಗಳನ್ನು ಬಳಸಿ ಬೆದರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಆರೋಪಿಸಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳು, ಪಾಕಿಸ್ತಾನಿಗಳು, ಬಾಂಗ್ಲಾದೇಶೀಯರು, ಭಯೋತ್ಪಾದಕರು ಎಂದು ಕರೆಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಡಲಾಗುತ್ತಿದೆ. ಅಲ್ಲದೆ, ವೈಯಕ್ತಿಕವಾಗಿ ನಿಂದಿಸಿ ಬೆದರಿಕೆ ಹಾಕುವಂತಹ ಘಟನೆಗಳು ನಡೆಯುತ್ತಿವೆ. ಇಂತಹ ಬೆಳವಣಿಗೆಗಳು ಆತಂಕಕಾರಿಯಾಗಿದ್ದು, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ ಎಂದು ಹೇಳಿದರು.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಎಲ್ಲೆ ಮೀರಿದ ರೀತಿಯಲ್ಲಿ ಪೋಸ್ಟ್ಗಳನ್ನು ಪ್ರಕಟಿಸಿ ವ್ಯಕ್ತಿಗಳ ತೇಜೋವಧೆ ಮಾಡಲಾಗುತ್ತಿದೆ. ಇಂತಹ ಸಂಸ್ಕೃತಿ ಸಮಾಜಕ್ಕೆ ಒಳ್ಳೆಯದಲ್ಲ. ಅವರ ಕೃತ್ಯಗಳಿಗೆ ನಮ್ಮ ಕಡೆಯಿಂದಲೂ ಪ್ರತಿಕ್ರಿಯೆಗಳು ಬಂದಿರುವುದು ನಿಜ. ಆದರೆ ಯಾರೇ ಆಗಲಿ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಕಾರ್ಯಕರ್ತರಿಗೆ ವೈಯಕ್ತಿಕ ನಿಂದನೆ ಹಾಗೂ ಬೆದರಿಕೆಗಳಿಗೆ ಮುಂದಾಗದಂತೆ ಸೂಚನೆ ನೀಡಬೇಕು ಎಂದು ಎಂ.ಜಿ. ಹೆಗಡೆ ಆಗ್ರಹಿಸಿದರು.
ವಿದ್ಯಾರ್ಥಿಗಳ ಬಳಿ ಪ್ರಧಾನಿ ಮೋದಿ ಕ್ಷಮೆಯಾಚಿಸಬಾರದಿತ್ತು ಎಂದು ಚಲನಚಿತ್ರ ನಟ ಅನಂತ್ ನಾಗ್ ನೀಡಿರುವ ಹೇಳಿಕೆ ಖಂಡನೀಯ ಎಂದು ಎಂ.ಜಿ. ಹೆಗಡೆ ಹೇಳಿದರು.

ಕೀಳುಮಟ್ಟದ ರಾಜಕಾರಣ ನಡೆಸುತ್ತಿರುವುದನ್ನು ಅರಿಯದೆ ‘ಗುಡ್ ಗವರ್ನೆನ್ಸ್’ ಎಂದು ಹೊಗಳುವುದು ಹಾಗೂ ‘ಅಂಟು ರೋಗ’ ಎಂಬ ಪದ ಬಳಸಿರುವುದು ಸರಿಯಲ್ಲ. ಇಂತಹ ಹೇಳಿಕೆ ನೀಡಿರುವ ಅನಂತ್ ನಾಗ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯಕ್, ಪ್ರಮುಖರಾದ ಸುಹಾನ್ ಆಳ್ವ,ರಿಷೇಲ್ ಶ್ರುತಿ, ಶಾನ್ ಶಿರಿ, ಪ್ರಜ್ವಲ್ ಮತ್ತು ಸಂತೋಷ್ ಸುಳ್ಯ ಉಪಸ್ಥಿತರಿದ್ದರು.

