ಸಹಕಾರ ರಂಗದ ಅಭಿವೃದ್ಧಿಗೆ ಮೊಳಹಳ್ಳಿ ಶಿವರಾಯರ ಕೊಡುಗೆ ಅಪಾರ: ಡಾ. ಎಂ.ಎನ್. ರಾಜೇಂದ್ರ ಕುಮಾರ್

ಮಂಗಳೂರು:
ಸಹಕಾರ ರಂಗದ ಮೂಲಕ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ತೋರಿಸಿಕೊಟ್ಟಿದ್ದಾರೆ. ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳು ಇಂದಿಗೂ ನಮಗೆ ಮಾದರಿಯಾಗಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ಮೊಳಹಳ್ಳಿ ಶಿವರಾಯರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅರವಿಂದ ಚೊಕ್ಕಾಡಿ ಅವರು ರಚಿಸಿದ ‘ಮೊಗೆದಷ್ಟು ಬೆಳೆಯುವ ಮೊಳಹಳ್ಳಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮೊಳಹಳ್ಳಿ ಶಿವರಾಯರು ಸುಮಾರು ಆರು ದಶಕಗಳ ಕಾಲ ಸಹಕಾರಿ ರಂಗವನ್ನು ಕಟ್ಟಿ ಬೆಳೆಸಿದ ಮಹನೀಯರು. ಸಹಕಾರ ಕ್ಷೇತ್ರದ ಮೂಲಕ ಸಮಾಜಕ್ಕೆ ಯಾವ ರೀತಿಯ ಸೇವೆ ನೀಡಬಹುದು ಎಂಬುದನ್ನು ಅವರು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ವಾಣಿಜ್ಯ ಬ್ಯಾಂಕ್‌ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನಗೊಂಡ ಸಂದರ್ಭದಲ್ಲಿಯೂ ಸಹಕಾರಿ ಬ್ಯಾಂಕ್‌ಗಳು ಜಿಲ್ಲೆಯಲ್ಲಿ ಬಲಿಷ್ಠವಾಗಿ ಉಳಿದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿವೆ. ಇದರ ಹಿಂದೆ ಮೊಳಹಳ್ಳಿ ಶಿವರಾಯರ ದೂರದೃಷ್ಟಿ ಮತ್ತು ಕೊಡುಗೆ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಮೊಳಹಳ್ಳಿ ಶಿವರಾಯರ ಆದರ್ಶಗಳು ಮುಂದಿನ ದಿನಗಳಲ್ಲಿಯೂ ಸಹಕಾರಿ ರಂಗದ ಬೆಳವಣಿಗೆಗೆ ಪ್ರೇರಣೆಯಾಗಲಿ ಎಂದು ಡಾ. ರಾಜೇಂದ್ರ ಕುಮಾರ್ ಆಶಿಸಿದರು.

ಮೊಳಹಳ್ಳಿ ಶಿವರಾಯರು ಕರಾವಳಿಯ ಅಭಿವೃದ್ಧಿಯ ಪ್ರಮುಖ ಶಕ್ತಿ: ಅರವಿಂದ ಚೊಕ್ಕಾಡಿ

ಕೃತಿ ರಚಿಸಿದ ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ, ಮಿತಭಾಷಿ ಮೊಳಹಳ್ಳಿ ಶಿವರಾಯರು ಕರಾವಳಿಯನ್ನು ಕಟ್ಟಿದ ಪ್ರಮುಖ ಮಹನೀಯರಲ್ಲಿ ಒಬ್ಬರು. ಸಾಮಾಜಿಕ ಮುಖಂಡ ಕುದ್ಮುಲ್ ರಂಗರಾವ್, ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡ್ ಸದಾಶಿವರಾವ್ ಅವರೊಂದಿಗೆ ಸಹಕಾರಿ ರಂಗದ ಮೂಲಕ ಜನರಿಗೆ ಆರ್ಥಿಕ ಶಕ್ತಿ ನೀಡಿದವರು ಮೊಳಹಳ್ಳಿ ಶಿವರಾಯರು ಎಂದು ಹೇಳಿದರು.

ಸಹಕಾರಿ ಕ್ಷೇತ್ರವು ಸೂಕ್ಷ್ಮ ಕ್ಷೇತ್ರವಾಗಿದ್ದು, ಎಲ್ಲ ಜಾತಿ, ಧರ್ಮದ ಜನರನ್ನು ಒಗ್ಗೂಡಿಸಿಕೊಂಡು ಸಾಗಬೇಕಾಗುತ್ತದೆ. ಮೊಳಹಳ್ಳಿ ಶಿವರಾಯರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಅವರ ಚಿಂತನೆಗಳನ್ನು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮತ್ತಷ್ಟು ವಿಸ್ತರಿಸಿ ಸಹಕಾರಿ ರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.

ಮೊಳಹಳ್ಳಿ ಶಿವರಾಯರ ಸಹಕಾರಿ ಚಿಂತನೆಯಿಂದ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಮೂಡಿತ್ತು. ಪುತ್ತೂರಿನಲ್ಲಿ ಬೀದಿ ದೀಪ ವ್ಯವಸ್ಥೆ ಆರಂಭಿಸಲು ಅವರು ಕಾರಣರಾದರು. ಪಾಣೆಮಂಗಳೂರು ಸೇತುವೆ ನಿರ್ಮಾಣಕ್ಕೆ ಜನರಿಂದ ದೇಣಿಗೆ ಸಂಗ್ರಹಿಸಿದರು. ಪುತ್ತೂರಿನಲ್ಲಿ ದಸರಾ ಉತ್ಸವ ಆರಂಭಿಸಿದರು. ಹೈನುಗಾರಿಕೆ, ಮುದ್ರಣಾಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿಗೆ ಬಲ ನೀಡಿದರು ಎಂದು ಅರವಿಂದ ಚೊಕ್ಕಾಡಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಜಯರಾಮ ರೈ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್‌ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಎನ್. ಸತೀಶ್‌ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ನೋಟ್ಟು ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!