ಮಂಗಳೂರು: ರಾಜ್ಯ ಸರ್ಕಾರದ ಮಂಗಳೂರಿನ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಹಾಗೂ ಮಲೆನಾಡಿಗೆ ₹36,611 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಘೋಷಿಸಿದ್ದರೂ, ತುಳುನಾಡಿನ ಆದಿದ್ರಾವಿಡ ಸಮುದಾಯದ ಬೇಡಿಕೆಗಳಿಗೆ ಯಾವುದೇ ಅನುದಾನ ಅಥವಾ ಯೋಜನೆ ಘೋಷಿಸದಿರುವುದನ್ನು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಖಂಡಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಮೂಡುಬಿದಿರೆಯ ಮಿಜಾರು ಗ್ರಾಮದ ಅಲೇರಿಯಲ್ಲಿರುವ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರದ ಜೀರ್ಣೋದ್ಧಾರಕ್ಕೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ₹10 ಕೋಟಿ ಅನುದಾನವನ್ನು ಕೂಡ ಇದುವರೆಗೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಆದಿದ್ರಾವಿಡ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ‘ಸಾರಮಾನಿ’ ಹೆಸರಿನಲ್ಲಿ ಪ್ರತ್ಯೇಕವಾಗಿ ಗುರುತಿಸುವುದು, ಒಳ ಮೀಸಲಾತಿ ಪ್ರಕ್ರಿಯೆಯಲ್ಲಿನ ಸಮಸ್ಯೆ ಪರಿಹರಿಸುವುದು ಹಾಗೂ ಡಿಸಿ ಮನ್ನಾ ಭೂಮಿ ಹಂಚಿಕೆ ಪ್ರಕ್ರಿಯೆ ಚುರುಕುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಮುದಾಯದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ವಾರಗಳ ಕಾಲಾವಕಾಶ ಕೇಳಿದ್ದು, ಈ ಅವಧಿಯಲ್ಲಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೂ ಆಗ್ರಹಿಸಿದರು.
ಸಮುದಾಯದ ಬೇಡಿಕೆಗಳ ನಿರ್ಲಕ್ಷ್ಯ ಖಂಡಿಸಿ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದನ್ನು ಸಂಘ ಸ್ವಾಗತಿಸಿದೆ ಎಂದರು .
ಎರಡು ವಾರಗಳ ಒಳಗಾಗಿ ನಮ್ಮ ಬೇಡಿಕೆ ಈಡೇರದೆ ಇದ್ದಲ್ಲಿ ಸರಕಾರ ವಿರುದ್ಧ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆಯ ಸಂದೇಶವನ್ನು ಅವರು ನೀಡಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಅನಿಲ್ ಕುಮಾರ್, ಸುರೇಶ್, ಶಿವರಾಜ್, ಪ್ರೀತಮ್, ಸಂತೋಷ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

