ಮಂಗಳೂರು:ಅಸೋಸಿಯೇಷನ್ ಆಫ್ ಸದರ್ನ್ ಯುರಾಲಜಿಸ್ಟ್ (Association of Southern Urologists) ವತಿಯಿಂದ ಆಯೋಜಿಸಲಾಗುತ್ತಿರುವ 37ನೇ ವಾರ್ಷಿಕ ಸಮ್ಮೇಳನ ‘SZUSICON 2026’ ಆಗಸ್ಟ್ 7ರಿಂದ 9ರವರೆಗೆ ಮಂಗಳೂರಿನ ಮೇರಿ ಹಿಲ್ನಲ್ಲಿರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನು ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಂಗಳೂರು ಯುರಾಲಜಿ ಫೋರಂ ಜಂಟಿಯಾಗಿ ಆಯೋಜಿಸುತ್ತಿವೆ. ಯುರಾಲಜಿ (ಮೂತ್ರಶಾಸ್ತ್ರ) ಕ್ಷೇತ್ರದಲ್ಲಿ ಜ್ಞಾನ ವಿನಿಮಯ, ಸಂಶೋಧನೆ ಹಾಗೂ ಇತ್ತೀಚಿನ ವೈದ್ಯಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಇದು ಪ್ರಮುಖ ಶೈಕ್ಷಣಿಕ ವೇದಿಕೆಯಾಗಲಿದೆ ಎಂದರು.

ಸಮ್ಮೇಳನದ ಕುರಿತು ಮಾಹಿತಿ ನೀಡಿದ ಸಂಘಟನಾ ಕಾರ್ಯದರ್ಶಿ ಡಾ. ಬಿ.ಎಂ. ಝೀಶಾನ್ ಹಮೀದ್, ದೇಶದ ವಿವಿಧ ಭಾಗಗಳಿಂದ ಹಿರಿಯ ಯುರಾಲಜಿಸ್ಟ್ಗಳು, ಯುರಾಲಜಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು, ವೈದ್ಯಕೀಯ ತಜ್ಞರು ಹಾಗೂ ಯುರಾಲಜಿಕಲ್ ಶಸ್ತ್ರಚಿಕಿತ್ಸಾ ಉಪಕರಣಗಳ ತಯಾರಕರು ಮತ್ತು ಪೂರೈಕೆದಾರರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆಯುವ ಈ ವೈಜ್ಞಾನಿಕ ಸಮ್ಮೇಳನದಲ್ಲಿ ದೇಶಾದ್ಯಂತದಿಂದ 1,500ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ ಭಾಗವಹಿಸುವವರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

ಸಂಘಟನಾ ಖಜಾಂಚಿ ಡಾ. ಪ್ರೀತಮ್ ಶರ್ಮಾ ಮಾತನಾಡಿ , ಸಮ್ಮೇಳನದ ಉದ್ಘಾಟನಾ ಸಮಾರಂಭವು ಆಗಸ್ಟ್ 7ರಂದು ಶುಕ್ರವಾರ ಸಂಜೆ 5 ಗಂಟೆಗೆ ಪಾಲೇಮಾರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಫರೀದ್ ಹಾಗೂ ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದರು .

ಮಂಗಳೂರಿನಲ್ಲಿ ಇಷ್ಟು ದೊಡ್ಡ ಮಟ್ಟದ ಯುರಾಲಜಿ ಸಮ್ಮೇಳನ ನಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ನಗರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವೈವಿಧ್ಯಮಯ ಆಹಾರ ಪದ್ಧತಿ ಹಾಗೂ ಜನರ ಆತಿಥ್ಯದಿಂದಾಗಿ ಪ್ರತಿನಿಧಿಗಳು ಮಂಗಳೂರಿಗೆ ಆಗಮಿಸಲು ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಸದಸ್ಯರಾದ ಡಾ. ಸುಯೋಗ್ ಉಪಸ್ಥಿತರಿದ್ದರು.


