ಮಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಗಿಂಗ್ ಸಂಪೂರ್ಣ ನಿಷೇಧವಾಗಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೊಲೀಸ್ ವ್ಯವಸ್ಥೆಯ ವೈಫಲ್ಯ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ .

ರ್ಯಾಗಿಂಗ್ ವಿರುದ್ಧ ಕೇಂದ್ರ ಸರ್ಕಾರದ ಕಾನೂನು ಹಾಗೂ ನಿಯಮಗಳು ಈಗಾಗಲೇ ಜಾರಿಯಲ್ಲಿವೆ. ಆದರೂ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಡೆಯುವುದು ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಜವಾಬ್ದಾರಿ . ಕೆಲವು ಕಡೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕೇವಲ ಹೆಸರು, ಊರು ಕೇಳುವುದಕ್ಕೆ ಸೀಮಿತವಾಗದೆ, ಅಸಭ್ಯವಾಗಿ ವರ್ತಿಸುವುದು, ಅವಮಾನಿಸುವುದು ಹಾಗೂ ಮಾನಸಿಕ ಕಿರುಕುಳ ನೀಡುವ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳು ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿ ಕಾಲೇಜಿನಲ್ಲಿ ಆಂಟಿ ರ್ಯಾಗಿಂಗ್ ಸಮಿತಿ ಇರಬೇಕು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಅವರ ಹಕ್ಕುಗಳು, ಸಮಸ್ಯೆ ಎದುರಾದರೆ ಸಂಪರ್ಕಿಸಬೇಕಾದ ಮಾರ್ಗಗಳ ಬಗ್ಗೆ ಜಾಗೃತಿ ನೀಡಬೇಕು. ಪೊಲೀಸ್ ಇಲಾಖೆ, ಕಾಲೇಜು ಆಡಳಿತ ಹಾಗೂ ಕೌನ್ಸಿಲರ್ಗಳು ಸೇರಿ ಆಂಟಿ ರ್ಯಾಗಿಂಗ್ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದಿದ್ದಾರೆ.

ಕಾಲೇಜು ಆವರಣದ ಹೊರಗೆ, ಹಾಸ್ಟೆಲ್ಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ರ್ಯಾಗಿಂಗ್ ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯ ವೈಫಲ್ಯವಾಗಿದೆ. ಪೊಲೀಸರು ಇಂತಹ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ಸ್ವಯಂಪ್ರೇರಿತವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರ್ಯಾಗಿಂಗ್ ಹೆಲ್ಪ್ಲೈನ್ ಇದ್ದರೂ ಭಯದಿಂದ ಅನೇಕ ವಿದ್ಯಾರ್ಥಿಗಳು ದೂರು ನೀಡಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಕಲಿಯಲು ಅನುಕೂಲವಾಗುವಂತಹ ಸುರಕ್ಷಿತ ವಾತಾವರಣ ನಿರ್ಮಾಣ ಮಾಡುವುದು ಅಗತ್ಯ ಎಂದು ಡಾ. ವೈ. ಭರತ್ ಶೆಟ್ಟಿ ಹೇಳಿದ್ದಾರೆ .

