ನವಮಾಸ ಹೊತ್ತು, ಹೆತ್ತು, ಸಾಕಿದವಳು…
ಅವಳೇ ನನ್ನ ಅಮ್ಮ.
ನನ್ನ ತಪ್ಪುಗಳನ್ನು ತಿದ್ದಿ,
ಒಳ್ಳೆಯ ಬುದ್ಧಿ ಹೇಳಿ ಬೆಳೆಸಿದವಳು…
ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದವಳು…
ನಾನು ಬಿದ್ದು ಗಾಯವಾದಾಗ,
ಅದಕ್ಕೆ ಔಷಧಿ ಹಚ್ಚಿ
ಸಾಂತ್ವನ ಹೇಳಿದವಳು…


”ಅಮ್ಮ” ಎಂಬ ಪದ ಎಷ್ಟು ಸುಂದರ!
ನಮ್ಮ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳಿದ್ದರೂ,
ಅವಳ ಪ್ರೀತಿಯನ್ನು ಮೀರಿಸುವ ಶಕ್ತಿ ಯಾವುದಕ್ಕೂ ಇಲ್ಲ.
ಯಾಕೆಂದರೆ…
ತನ್ನ ಇಡೀ ಜೀವನವನ್ನೇ ಮಕ್ಕಳಿಗಾಗಿ
ಅರ್ಪಿಸಿಕೊಂಡವಳು ಅವಳು.
ಸದಾ ನಮ್ಮ ಒಳಿತನ್ನೇ ಬಯಸುವಳು.
ನಾವು ಬೆಳೆದು ದೊಡ್ಡವರಾದ ಮೇಲೆ,
ಬಾಯಿತಪ್ಪಿ ಆಡಿದ ಒಂದು ಮಾತನ್ನೂ
ಸಹಿಸಲಾರದೆ,
ಮೂಲೆಯಲ್ಲಿ ನಿಂತು ಕಣ್ಣೀರಿಡುವಳು.


ಆದರೆ,
ನಮಗೆ ಬುದ್ಧಿ ಹೇಳಿ ಬೈದರೂ,
ಸ್ವಲ್ಪ ಹೊತ್ತಿನಲ್ಲೇ
ಮತ್ತೆ ನಮ್ಮ ಬಳಿಗೆ ಬಂದು
ಕೈತುತ್ತು ನೀಡಿ,
ನಮ್ಮ ಕಣ್ಣೀರನ್ನೇ ಒರೆಸುವಳು.
ಇಷ್ಟೆಲ್ಲಾ ಮಾಡಿದರೂ,
ಇಂದಿನ ಕೆಲವು ಮಕ್ಕಳು ಕೇಳುವ ಪ್ರಶ್ನೆ ಒಂದೇ…
”ನೀನು ನನಗಾಗಿ ಏನು ಮಾಡಿದ್ದೀಯ?”
ನಿಜವಾಗಿಯೂ…
ಅವಳು ಏನೂ ಮಾಡಿಲ್ಲವೇ?
ಅವಳು ಏನು ಮಾಡಿದ್ದಾಳೆ ಎಂಬ ಅರಿವು,
ನಾಳೆ ನಮ್ಮ ಮಕ್ಕಳು
ನಮ್ಮನ್ನೇ ಇದೇ ಪ್ರಶ್ನೆ ಕೇಳಿದಾಗ ಮೂಡುತ್ತದೆ.

ಆಗ ನೆನಪಾಗುತ್ತದೆ…
ನಮ್ಮ ತಾಯಿ ನಮಗೆ
ಏನೆಲ್ಲಾ ಕೊಟ್ಟಳು…
ಏನೆಲ್ಲಾ ತ್ಯಾಗ ಮಾಡಿದಳು…
ಏನೆಲ್ಲಾ ಉಳಿಸಿ ಹೋದಳು…
ಆ ಸತ್ಯ ಅರಿವಾಗುವ ವೇಳೆಗೆ,
ಅವಳನ್ನು ಅಪ್ಪಿಕೊಳ್ಳಲು
ಅವಳು ನಮ್ಮ ಜೊತೆ ಇರದೇ ಇರಬಹುದು…
ಆಗ ಬದುಕಿನ ಒಂದು ಮೂಲೆಯು
ಶಾಶ್ವತವಾಗಿ ಶೂನ್ಯವಾಗಿರುತ್ತದೆ.
ಅಮ್ಮ ಇದ್ದಾಗಲೇ ಅವಳನ್ನು ಪ್ರೀತಿಸಿ,
ಅವಳನ್ನು ಗೌರವಿಸಿ,
ಅವಳೊಂದಿಗೆ ಸಮಯ ಕಳೆಯಿರಿ…
ಏಕೆಂದರೆ ಅಮ್ಮನ ಸ್ಥಾನವನ್ನು
ಈ ಜಗತ್ತಿನಲ್ಲಿ ಯಾರೂ ತುಂಬಲಾರರು.

ಬರವಣಿಗೆ-ರಶ್ಮಿತಾ ಆಚಾರ್ಯ ಹೊಸಂಗಡಿ


