‎‎ಅಮ್ಮ… ನೀನು ನನಗಾಗಿ ಏನು ಮಾಡಿದೆ?

‎ನವಮಾಸ ಹೊತ್ತು, ಹೆತ್ತು, ಸಾಕಿದವಳು…
‎ಅವಳೇ ನನ್ನ ಅಮ್ಮ.

‎ನನ್ನ ತಪ್ಪುಗಳನ್ನು ತಿದ್ದಿ,
‎ಒಳ್ಳೆಯ ಬುದ್ಧಿ ಹೇಳಿ ಬೆಳೆಸಿದವಳು…
‎ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿದವಳು…

‎ನಾನು ಬಿದ್ದು ಗಾಯವಾದಾಗ,
‎ಅದಕ್ಕೆ ಔಷಧಿ ಹಚ್ಚಿ
‎ಸಾಂತ್ವನ ಹೇಳಿದವಳು…



‎”ಅಮ್ಮ” ಎಂಬ ಪದ ಎಷ್ಟು ಸುಂದರ!

‎ನಮ್ಮ ಬಳಿ ಎಷ್ಟೇ ಬೆಲೆಬಾಳುವ ವಸ್ತುಗಳಿದ್ದರೂ,
‎ಅವಳ ಪ್ರೀತಿಯನ್ನು ಮೀರಿಸುವ ಶಕ್ತಿ ಯಾವುದಕ್ಕೂ ಇಲ್ಲ.

‎ಯಾಕೆಂದರೆ…
‎ತನ್ನ ಇಡೀ ಜೀವನವನ್ನೇ ಮಕ್ಕಳಿಗಾಗಿ
‎ಅರ್ಪಿಸಿಕೊಂಡವಳು ಅವಳು.

‎ಸದಾ ನಮ್ಮ ಒಳಿತನ್ನೇ ಬಯಸುವಳು.
‎ನಾವು ಬೆಳೆದು ದೊಡ್ಡವರಾದ ಮೇಲೆ,
‎ಬಾಯಿತಪ್ಪಿ ಆಡಿದ ಒಂದು ಮಾತನ್ನೂ
‎ಸಹಿಸಲಾರದೆ,
‎ಮೂಲೆಯಲ್ಲಿ ನಿಂತು ಕಣ್ಣೀರಿಡುವಳು.



‎ಆದರೆ,
‎ನಮಗೆ ಬುದ್ಧಿ ಹೇಳಿ ಬೈದರೂ,
‎ಸ್ವಲ್ಪ ಹೊತ್ತಿನಲ್ಲೇ
‎ಮತ್ತೆ ನಮ್ಮ ಬಳಿಗೆ ಬಂದು
‎ಕೈತುತ್ತು ನೀಡಿ,
‎ನಮ್ಮ ಕಣ್ಣೀರನ್ನೇ ಒರೆಸುವಳು.

‎ಇಷ್ಟೆಲ್ಲಾ ಮಾಡಿದರೂ,
‎ಇಂದಿನ ಕೆಲವು ಮಕ್ಕಳು ಕೇಳುವ ಪ್ರಶ್ನೆ ಒಂದೇ…

‎”ನೀನು ನನಗಾಗಿ ಏನು ಮಾಡಿದ್ದೀಯ?”

‎ನಿಜವಾಗಿಯೂ…
‎ಅವಳು ಏನೂ ಮಾಡಿಲ್ಲವೇ?

‎ಅವಳು ಏನು ಮಾಡಿದ್ದಾಳೆ ಎಂಬ ಅರಿವು,
‎ನಾಳೆ ನಮ್ಮ ಮಕ್ಕಳು
‎ನಮ್ಮನ್ನೇ ಇದೇ ಪ್ರಶ್ನೆ ಕೇಳಿದಾಗ ಮೂಡುತ್ತದೆ.



‎ಆಗ ನೆನಪಾಗುತ್ತದೆ…

‎ನಮ್ಮ ತಾಯಿ ನಮಗೆ
‎ಏನೆಲ್ಲಾ ಕೊಟ್ಟಳು…
‎ಏನೆಲ್ಲಾ ತ್ಯಾಗ ಮಾಡಿದಳು…
‎ಏನೆಲ್ಲಾ ಉಳಿಸಿ ಹೋದಳು…

‎ಆ ಸತ್ಯ ಅರಿವಾಗುವ ವೇಳೆಗೆ,
‎ಅವಳನ್ನು ಅಪ್ಪಿಕೊಳ್ಳಲು
‎ಅವಳು ನಮ್ಮ ಜೊತೆ ಇರದೇ ಇರಬಹುದು…

‎ಆಗ ಬದುಕಿನ ಒಂದು ಮೂಲೆಯು
‎ಶಾಶ್ವತವಾಗಿ ಶೂನ್ಯವಾಗಿರುತ್ತದೆ.

‎ಅಮ್ಮ ಇದ್ದಾಗಲೇ ಅವಳನ್ನು ಪ್ರೀತಿಸಿ,
‎ಅವಳನ್ನು ಗೌರವಿಸಿ,
‎ಅವಳೊಂದಿಗೆ ಸಮಯ ಕಳೆಯಿರಿ…
‎ಏಕೆಂದರೆ ಅಮ್ಮನ ಸ್ಥಾನವನ್ನು
‎ಈ ಜಗತ್ತಿನಲ್ಲಿ ಯಾರೂ ತುಂಬಲಾರರು.

ಬರವಣಿಗೆ-ರಶ್ಮಿತಾ ಆಚಾರ್ಯ ಹೊಸಂಗಡಿ

SHARE
Loading spinner

Leave a Reply

Your email address will not be published. Required fields are marked *

error: Content is protected !!