ಮಂಗಳೂರು : ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕುಲಾಲ್ ಸಮಾಜದ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಬೆಳಿಗ್ಗೆ 11.30ಕ್ಕೆ ಕದ್ರಿ ಬಂಜನ್ ಚಾವಡಿಯಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಘಟಕ, ಪ್ರೊ. ಹಾಗೂ ಎನ್‌ಸಿಸಿ (ನೇವಲ್ ವಿಂಗ್) ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಗೆ ಸೇವೆ ಸಲ್ಲಿಸಿರುವ ಕುಲಾಲ್ ಸಮಾಜದ 60ಕ್ಕೂ ಹೆಚ್ಚು ನಿವೃತ್ತ ವೀರ ಯೋಧರು ಮತ್ತು ವೀರ ನಾರಿಯರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯೋಧರ ಅಮೂಲ್ಯ ಸೇವೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ಶ್ರೀ ನಾಗಬ್ರಹ್ಮ ದೇವರು ಹಾಗೂ ಕ್ಷೇತ್ರದ ದೈವಗಳ ಆಶೀರ್ವಾದವನ್ನು ಕೋರುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮಹಾ ಪ್ರಾಯೋಜಕರಾಗಿ ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ಟ್ರಸ್ಟಿ ಸದಾಶಿವ ಬಂಜನ್ ಆರ್. ಪೂನಾ ಹಾಗೂ ಮುಖ್ಯ ಪ್ರಾಯೋಜಕರಾಗಿ ಬೆಂಗಳೂರಿನ ರಾಧಾಕೃಷ್ಣ ಬಂಜನ್ ಕಾರ್ಯನಿರ್ವಹಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಶ್ರೀ ವೀರನಾರಾಯಣ ದೇವಸ್ಥಾನ, ಕುಲಶೇಖರದ ಅಧ್ಯಕ್ಷ ಸುಂದರ ಮೂಲ್ಯ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಹಾಗೂ ಬಿಎಸ್‌ಎನ್‌ಎಲ್‌ನ ನಿವೃತ್ತ ಡಿಜಿಎಂ ಐತಪ್ಪ ಮೂಲ್ಯ ಉಪಸ್ಥಿತರಿರುವರು.

ಕ್ಷೇತ್ರದ ಅಧ್ಯಕ್ಷ ಪೊವಪ್ಪ ಕಡಂಬಾರ್ ಸೇರಿದಂತೆ ಹಲವು ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳು ಮಾಜಿ ಯೋಧರಾಗಿರುವ ಹಿನ್ನೆಲೆಯಲ್ಲಿ ಸಮಾಜದ ನಿವೃತ್ತ ಯೋಧರನ್ನು ಗುರುತಿಸಿ ಗೌರವಿಸುವ ಪರಿಕಲ್ಪನೆಯಡಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸನ್ಮಾನಕ್ಕೆ ಆಗಮಿಸುವ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರು ತಾವು ಸೇವಾವಧಿಯಲ್ಲಿ ಧರಿಸಿದ್ದ ಸೇನಾ ಸಮವಸ್ತ್ರದಲ್ಲೇ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಇದು ಸಮಾರಂಭದ ಪ್ರಮುಖ ಆಕರ್ಷಣೆಯಾಗಲಿದೆ ಎಂದರು.
ಸನ್ಮಾನ ಸಮಾರಂಭದ ಬಳಿಕ ‘ಆಟಿದ ಕೂಟ’ ಎಂಬ ವಿಶೇಷ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಲಿದ್ದು, ಕುಲಾಲ್ ಸಮಾಜದ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟಕರಾದ ಗೋಪಾಲ್ ಎನ್. ಕುಲಾಲ್ ಹಾಗೂ ರವಿಚಂದ್ರ ಬಂಜನ್ ಉಪಸ್ಥಿತರಿದ್ದರು.

