ಬಂಟ್ವಾಳ, ಆ.6: ಬಿಸಿರೋಡಿನ ಎನ್.ಜಿ. ಸರ್ಕಲ್‌ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಯಶವಂತ್ ಹಾಗೂ ದಯಾನಂದ್ ಎಂಬ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಟಿಪ್ಪರ್ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಅಪಘಾತದ ಬಳಿಕ ಚಾಲಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಘಟನೆ ನಡೆದ ವೇಳೆ ಅಲ್ಲಿಯೇ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಅಪಘಾತ ಸಂಭವಿಸಿದ ತಕ್ಷಣ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಟ್ರಾಫಿಕ್ ಎಸ್‌ಐ ಆದರ್ಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ವಾಹನಗಳ ಸಾಲು ನಿರ್ಮಾಣವಾಗಿತ್ತು.

ಅಪಘಾತದ ಬಳಿಕ ಗಾಯಾಳುಗಳು ರಸ್ತೆಯಲ್ಲೇ ಬಿದ್ದಿದ್ದರೂ ತಕ್ಷಣ ಆಸ್ಪತ್ರೆಗೆ ಸಾಗಿಸುವ ಕಾರ್ಯ ವಿಳಂಬವಾಯಿತು ಎಂಬ ಆರೋಪವೂ ಕೇಳಿಬಂದಿದೆ. ಸ್ಥಳದಲ್ಲಿದ್ದ ಹಲವರು ವಿಡಿಯೋ ಹಾಗೂ ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಯಾರೂ ಮುಂದಾಗಲಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕರೊಬ್ಬರು ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ನಡುವೆ ಎನ್.ಜಿ. ಸರ್ಕಲ್‌ನಲ್ಲಿ ಅನಧಿಕೃತ ಮೀನು ವ್ಯಾಪಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೀನು ಖರೀದಿಸಲು ಬರುವವರು ರಸ್ತೆಯ ಮಧ್ಯೆಯೇ ವಾಹನಗಳನ್ನು ನಿಲ್ಲಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆದ್ದರಿಂದ ಅನಧಿಕೃತ ಮೀನು ವ್ಯಾಪಾರವನ್ನು ತೆರವುಗೊಳಿಸಿ, ವಾಹನ ನಿಲುಗಡೆಗೆ ನಿಯಂತ್ರಣ ಹೇರಲು ಪುರಸಭೆ ಹಾಗೂ ಟ್ರಾಫಿಕ್ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

