ವಿಪ್ರ ವೇದಿಕೆ ದಶಮಾನೋತ್ಸವ ಸಮಾರೋಪ ಆ.16ರಂದು; ‘ವಿಪ್ರ ಚಿತ್ರ ಸಂಚಯ’ ಲೋಕಾರ್ಪಣೆ

ಮಂಗಳೂರು:ವಿಪ್ರ ವೇದಿಕೆ (ರಿ) ಸ್ಥಾಪನೆಯಾಗಿ ಯಶಸ್ವಿಯಾಗಿ ಹತ್ತು ವರ್ಷಗಳನ್ನು ಪೂರೈಸಿ 11ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ದಶಮಾನೋತ್ಸವ ಸಮಾರೋಪ ಸಮಾರಂಭವನ್ನು ಆಗಸ್ಟ್‌ 16ರಂದು ಬೆಳಿಗ್ಗೆ 8.30 ರಿಂದ ಕೋಡಿಕಲ್‌ನ ಶ್ರೀ ಬೆನಕ ಜ್ಯೋತಿಷ್ಯಾಲಯದ ವೇ.ಮೂ. ಶ್ರೀ ವಿಶ್ವಕುಮಾರ್ ಜೋಯಿಸರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಮಾನೋತ್ಸವದ ಅಂಗವಾಗಿ ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮಾರೋಪ ಸಮಾರಂಭದ ಸ್ಮರಣಾರ್ಥ ‘ವಿಪ್ರ ಚಿತ್ರ ಸಂಚಯ’ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಸಮಾರಂಭವನ್ನು ವಿದ್ವಾನ್ ಪಂಜ ಭಾಸ್ಕರ ಭಟ್ ಕೆ. ಧಾರ್ಮಿಕ ಸಂದೇಶದೊಂದಿಗೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಎಂ.ಬಿ. ಪುರಾಣಿಕ್, ಡಿ. ರಮೇಶ್ ತಂತ್ರಿ, ಡಾ. ಎಂ.ಪಿ. ಶ್ರೀನಾಥ್, ಅರುಣ ಐತಾಳ್, ವೈ. ಕೇಶವ ಭಟ್ ಹಾಗೂ ಸಂಪತ್ ಕುಮಾರ್ ಭಟ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಡಾ. ಸತ್ಯಕೃಷ್ಣ ಭಟ್ ಅವರು ‘ಬ್ರಾಹ್ಮಣ್ಯ ಮತ್ತು ಅನುಷ್ಠಾನ’ ವಿಷಯದ ಕುರಿತು ವಿಚಾರಗೋಷ್ಠಿ ನಡೆಸಲಿದ್ದಾರೆ. ಸದಸ್ಯರು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಪರಾಹ್ನ ಜಿಲ್ಲೆಯ ಖ್ಯಾತ ಕಲಾವಿದರಿಂದ ‘ಶ್ರೀ ಕೃಷ್ಣ ಚಂದ್ರಾವಳಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ವೇ.ಮೂ. ಸುಬ್ರಹ್ಮಣ್ಯ ತಂತ್ರಿಗಳು ಕೆ. ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಕಲ್ಕೂರ, ರಾಘವೇಂದ್ರ ರಾವ್ ಹೆಚ್.ವಿ., ರಮೇಶ್ ರಾವ್ ಕಲ್ಟಾವಿ, ದಾಮೋದರ ಭಟ್ ತಲೆಕಳ ಹಾಗೂ ಅನೂಪ್ ಕುಮಾರ್ ಬಾಗ್ಲೋಡಿ ಭಾಗವಹಿಸಲಿದ್ದಾರೆ.

ಹತ್ತು ವರ್ಷಗಳ ಹಿಂದೆ ವಿಪ್ರ ವೇದಿಕೆಯನ್ನು ಉದ್ಘಾಟಿಸಿದ್ದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ದಿನಪೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ವಿಪ್ರ ಬಂಧುಗಳನ್ನು ಮತ್ತಷ್ಟು ಸಂಘಟಿಸುವುದರ ಜೊತೆಗೆ ಸಂಘಟನೆಗೆ ಸ್ವಂತ ನಿವೇಶನ ಹೊಂದುವ ಗುರಿಯೂ ಇದೆ ಎಂದು ವರ್ಕಾಡಿ ರವಿ ಅಲೆವೂರಾಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ವಿಶ್ವೇಶ್ವರ ಭಟ್ ತೆಕ್ಕೆಕೆರೆ, ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್ ಕಟೀಲು, ಟ್ರಸ್ಟಿ ವೇ.ಮೂ. ವಿಶ್ವಕುಮಾರ್ ಜೋಯಿಸರು ಹಾಗೂ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!