ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಸಮೀಪವಿರುವ ಕ್ವಾರ್ಟರ್ಸ್, ಶೌಚಾಲಯ, ಕುನ್ನಿಲ್ ಜುಮಾ ಮಸೀದಿಯ ಪರಿಸರದಲ್ಲಿನ ಕೆಲವೊಂದು ಮನೆಗಳು, ಕೆ.ಜೆ.ಎಂ. ರಸ್ತೆ, ಕುನಿಲ್ ಶಾಲಾ ರಸ್ತೆ, ಬಡಾಜ್ ಚೌಕಿ ಮುಂತಾದ ಪ್ರದೇಶಗಳಲ್ಲಿನ ಕ್ವಾರ್ಟರ್ಸ್ ಹಾಗೂ ಮನೆಗಳಿಂದ ಅಡಿಗೆಮನೆ ಹಾಗೂ ಶೌಚಾಲಯಗಳ ಕೊಳಕು ನೀರು ನೇರವಾಗಿ ಸಾರ್ವಜನಿಕ ಸ್ಥಳಗಳಿಗೆ ಹರಿಯುತ್ತಿರುವ ದೃಶ್ಯಗಳು ಸ್ಥಳೀಯ ನಿವಾಸಿಗಳಲ್ಲಿ ತೀವೃ ಆತಂಕ ಸೃಷ್ಟಿಸಿದೆ.
ಸಾರ್ವಜನಿಕರು ನಡೆದಾಡುವ ಸ್ಥಳಗಳಲ್ಲಿ ಶೌಚಾಲಯದ ಕೊಳಕು ನೀರು ಹರಿವಿನಿಂದ ದುರ್ನಾತ, ಮಣ್ಣಿನ ಮಾಲಿನ್ಯ ಮತ್ತು ನೀರಿನ ಮಾಲಿನ್ಯ ಹೆಚ್ಚಾಗಿದೆ. ಇದು ಪರಿಸರದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ವರ್ಷಾಋತುವಿನಲ್ಲಿ ಈ ಸ್ಥಿತಿ ಮುಂದುವರಿದರೆ, ಭಾರೀ ಆರೋಗ್ಯ ಸಮಸ್ಯೆಗಳು ಹಾಗೂ ರೋಗಗಳ ಹರಡುವಿಕೆ ಸಂಭವಿಸಬಹುದು ಎಂದು ಜನತೆ ಎಚ್ಚರಿಕೆ ನೀಡುತ್ತಿದ್ದಾರೆ.
ಪ್ರತಿದಿನ ಈ ದಾರಿ ಮೂಲಕವೇ ಮಕ್ಕಳು, ಗರ್ಭಿಣಿಯರು, ವಯಸ್ಕರು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಬಾಧಿತರಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಇಂತಹ ಬೇ ಜವಾಬ್ದಾರಿ ನಿರ್ವಹಣೆಗಳು ಸಾರ್ವಜನಿಕ ಆರೋಗ್ಯಕ್ಕೂ ತೀವ್ರ ಹಾನಿಯನ್ನುಂಟು ಮಾಡುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳು ತುರ್ತಾಗಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಪಂಚಾಯತಿಗೂ ಆರೋಗ್ಯ ಇಲಾಖೆಗೂ ಹಲವಾರು ಬಾರಿ ದೂರು ನೀಡಿದರೂ, ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.