ಮಂಗಳೂರಿನಲ್ಲಿ ದಾರುಣ ಘಟನೆ: ಗಲ್ಫ್‌ನಿಂದ ಬಂದ ಯುವಕ ಲಾಡ್ಜ್‌ನಲ್ಲಿ ಶವವಾಗಿ ಪತ್ತೆ

ಮಂಗಳೂರು: ಸಹೋದರಿ ಆತ್ಮಹತ್ಯೆ ಮಾಡಿಕೊಂಡ ದುರಂತ ಮಾಸುವ ಮುನ್ನವೇ, ಆಕೆಯ ಸಹೋದರನೂ ಮಂಗಳೂರಿನ ಲಾಡ್ಜ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಕೇರಳದ ಬೇಕಲ್ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಮೃತ ಯುವಕ.

ಕಳೆದ ಜೂನ್‌ನಲ್ಲಿ ಅರ್ಜುನ್ ಅವರ ಸಹೋದರಿ ಐಜಾ ಆರ್. ಮಹೇಶ್ ಅವರು ತರಬೇತಿ ಕೇಂದ್ರದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಮರು ಪರೀಕ್ಷೆಯ ಸಿದ್ಧತೆಯಲ್ಲಿದ್ದ ಐಜಾ ಮಾನಸಿಕ ಒತ್ತಡದಿಂದ ಈ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿತ್ತು.

ತಂಗಿಯ ಸಾವಿನ ಬಳಿಕ ಗಲ್ಫ್‌ಗೆ ತೆರಳಿದ್ದ ಅರ್ಜುನ್, ಭಾನುವಾರ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಸ್ನೇಹಿತರಿಗೆ ಮನೆಗೆ ತೆರಳುವುದಾಗಿ ತಿಳಿಸಿದ್ದ ಅವರು, ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಮಂಗಳೂರಿಗೆ ಬಂದು ಹುಡುಕಾಟ ನಡೆಸಿದ್ದರು.

ಸೋಮವಾರ ಮಧ್ಯಾಹ್ನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರಿನ ಲಾಡ್ಜ್ ಕೋಣೆಯಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಒಂದೇ ಕುಟುಂಬದ ಇಬ್ಬರು ಯುವ ಮಕ್ಕಳ ಸತತ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಶೋಕದಲ್ಲಿದ್ದಾರೆ. ಘಟನೆ ಕುರಿತು ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!