ಮಹಿಳೆಯರ ಆರೋಗ್ಯ ಜಾಗೃತಿಗೆ ‘ಋತುತಾರ’ ಯೋಜನೆ ಸ್ವಾಗತಾರ್ಹ: ಮಮತಾ ಗಟ್ಟಿ

ಮಂಗಳೂರು: ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯ, ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ‘ಋತುತಾರ’ ಯೋಜನೆ ಸ್ವಾಗತಾರ್ಹ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಋತುಚಕ್ರದ ಕುರಿತು ಇರುವ ಮೂಢನಂಬಿಕೆ, ತಪ್ಪು ಕಲ್ಪನೆ ಹಾಗೂ ಮುಜುಗರಗಳನ್ನು ನಿವಾರಿಸಿ, ಮಹಿಳೆಯರಿಗೆ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ಸ್ವಚ್ಛತೆ ಹಾಗೂ ಆರೋಗ್ಯಕರ ಪದ್ಧತಿಗಳ ಕುರಿತು ಅರಿವು ಮೂಡಿಸುವುದರಿಂದ ಶಾಲಾ ಹಾಜರಾತಿ ಹೆಚ್ಚಿಸಲು ಸಹಕಾರಿಯಾಗಲಿದೆ. ಸ್ಯಾನಿಟರಿ ಪ್ಯಾಡ್‌ಗಳ ಸುರಕ್ಷಿತ ಬಳಕೆಯ ಜೊತೆಗೆ ಮೆನ್ಸ್ಟ್ರುವಲ್ ಕಪ್‌ನಂತಹ ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆಯೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಮೆನೋಪಾಸ್‌ ಬಗ್ಗೆಯೂ ಜಾಗೃತಿ ಅಗತ್ಯ

40–45 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಮೆನೋಪಾಸ್‌ (ಋತುಬಂಧ) ಹಂತದ ಕುರಿತು ಕೂಡ ಸೂಕ್ತ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ಅವಧಿಯಲ್ಲಿ ಕಾಣಿಸಿಕೊಳ್ಳುವ ಬಿಸಿ ಹೊಡೆಯುವುದು, ನಿದ್ರೆಯ ತೊಂದರೆ, ಮನಸ್ಥಿತಿಯಲ್ಲಿ ಬದಲಾವಣೆ ಸೇರಿದಂತೆ ವಿವಿಧ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ಮಹಿಳೆಯರಿಗೆ ವೈಜ್ಞಾನಿಕ ಮಾಹಿತಿ ನೀಡಬೇಕು ಎಂದು ಮಮತಾ ಗಟ್ಟಿ ಹೇಳಿದರು.

ಕಿಶೋರಾವಸ್ಥೆಯಿಂದ ಮೆನೋಪಾಸ್‌ವರೆಗೆ ಮಹಿಳೆಯರ ಜೀವನದ ಪ್ರತಿಯೊಂದು ಹಂತದಲ್ಲೂ ಆರೋಗ್ಯ, ಗೌರವ, ಸುರಕ್ಷತೆ ಹಾಗೂ ಆತ್ಮವಿಶ್ವಾಸವನ್ನು ಖಚಿತಪಡಿಸುವುದು ‘ಋತುತಾರ’ ಯೋಜನೆಯ ಉದ್ದೇಶವಾಗಿದೆ. ಪೋಷಕರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು ಹಾಗೂ ಮಾಧ್ಯಮಗಳು ಮಹಿಳೆಯರ ಆರೋಗ್ಯದ ಕುರಿತು ಮುಕ್ತ ಮತ್ತು ವೈಜ್ಞಾನಿಕ ಸಂವಾದಕ್ಕೆ ಉತ್ತೇಜನ ನೀಡಬೇಕು ಎಂದು ಅವರು ಕರೆ ನೀಡಿದರು.

‘ಋತುತಾರ’ ಕೇವಲ ಋತುಚಕ್ರದ ಸ್ವಚ್ಛತಾ ಕಾರ್ಯಕ್ರಮವಾಗಿರದೆ, ಕಿಶೋರಿಯರಿಂದ ಹಿಡಿದು ಮೆನೋಪಾಸ್‌ ಹಂತದ ಮಹಿಳೆಯರವರೆಗೆ ಆರೋಗ್ಯ ಅರಿವು ಹಾಗೂ ಆತ್ಮವಿಶ್ವಾಸ ಬೆಳೆಸುವ ಸಮಗ್ರ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪ್ರಮುಖರಾದ ಚಂಚಲಾಕ್ಷಿ, ವಿಜಯಲಕ್ಷ್ಮಿ ಶೆಟ್ಟಿ, ಸುಮಾ ಹಾಗೂ ಪ್ರೇಮಲತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!