ಮಂಗಳೂರು: ಮಂಗಳೂರಿನ ಸಾಹಿತ್ಯ ಕೇಂದ್ರದ ವತಿಯಿಂದ ‘ಪುಸ್ತಕ ಹಬ್ಬ–2026’ ಕಾರ್ಯಕ್ರಮವನ್ನು ಆಗಸ್ಟ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಗರದ ಸಂಘನಿಕೇತನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜನಾ ಸಮಿತಿಯ ಸಂಚಾಲಕ ಲತೇಶ್ ಬಾಕ್ರಬೈಲ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಜನತೆಯಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವುದು ಹಾಗೂ ಯುವಜನರಲ್ಲಿ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪುಸ್ತಕ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.

ಆಗಸ್ಟ್ 16ರಂದು ಬೆಳಗ್ಗೆ 10 ಗಂಟೆಗೆ ಖ್ಯಾತ ಲೇಖಕ ಹಾಗೂ ಕನ್ನಡಪ್ರಭ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ. ಸೋಮಣ್ಣ ಹೊಂಗಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಅದೇ ದಿನ ಬೆಳಗ್ಗೆ 11.45ಕ್ಕೆ ಡಾ. ಧನಂಜಯ ಕುಂಬ್ಳೆ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ವಿದ್ವಾನ್ ಮಹೇಶ್ ಪದ್ಯಾಣ ಬಳಗದಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 3.30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಸಂಜೆ 5.30ರಿಂದ ಎಸ್‌ಡಿಎಂ ರಂಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ‘ಬೇಂದ್ರ ಆಂದ್ರೆ’ ನಾಟಕ ಪ್ರದರ್ಶನ ನಡೆಯಲಿದೆ.

ಆಗಸ್ಟ್ 17ರಂದು ಬೆಳಗ್ಗೆ 10 ಗಂಟೆಯಿಂದ ಕಲಾಬಿ ಥಿಯೇಟರ್ ಎಕ್ಸ್‌ಪ್ರೆಸ್ ಪ್ರಸ್ತುತಿಯಲ್ಲಿ ‘ಅಜ್ಜಿ ಕಥೆಗಳು’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ‘ಸಿಂಧೂರ ಸಂಗ್ರಾಮ’ ಯಕ್ಷಗಾನ ಪ್ರದರ್ಶನ ಹಾಗೂ ಸಂಜೆ 5 ಗಂಟೆಯಿಂದ ನಾಡಿನ ಖ್ಯಾತ ಅರ್ಥಧಾರಿಗಳಿಂದ ‘ಶ್ರವಣ ಭಕ್ತ ಪರೀಕ್ಷಿತ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಆಗಸ್ಟ್ 18ರಂದು ಬೆಳಗ್ಗೆ 10.30ರಿಂದ ಡಾ. ಪಾದೇಕಲ್ಲು ವಿಷ್ಣು ಭಟ್ಟರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಕಥನ ವಿಚಾರಗೋಷ್ಠಿ ನಡೆಯಲಿದೆ. ‘ಭಾರತೀಯ ಮಹಾಕಾವ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ’ ಕುರಿತು ಡಾ. ವೀಣಾ ಬನ್ನಂಜೆ ಹಾಗೂ ‘ಪ್ರಾಚೀನ ತುಳು ಕಾವ್ಯ ಪರಂಪರೆ ಮತ್ತು ಆಧುನಿಕ ತುಳು ಸಾಹಿತ್ಯ’ ಕುರಿತು ಶ್ರೀಕಾಂತ್ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಯಿಂದ ‘ಮೊಬೈಲ್ ಯುಗದಲ್ಲಿ ಪುಸ್ತಕ’ ವಿಷಯದ ಕುರಿತು ವಿದ್ಯಾರ್ಥಿ ಗೋಷ್ಠಿ ನಡೆಯಲಿದೆ. ವಿಜೇತ್ ಶೆಟ್ಟಿ ಮಂಜನಾಡಿ, ಪೂರ್ಣಿಮಾ ಕೆ.ಎಂ., ಧಾರಿಣಿ ಎಸ್. ಕುಲಕರ್ಣಿ ಹಾಗೂ ರಂಗನಾಥ ಚಿತ್ರದುರ್ಗ ವಿಚಾರ ಮಂಡಿಸಲಿದ್ದು, ವಿಕಾಸ್‌ರಾಜ್ ಪೆರುವಾಯಿ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಕಲಾಬಿ ಥಿಯೇಟರ್ ಪ್ರಸ್ತುತಿಯಲ್ಲಿ ‘ಮಾರಿ ಕಾಡು’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಪುಸ್ತಕ ಹಬ್ಬದಲ್ಲಿ ಬೃಹತ್ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ರಾಜ್ಯದ ಪ್ರಸಿದ್ಧ ಕವಿಗಳು ಹಾಗೂ ಖ್ಯಾತ ಬರಹಗಾರರನ್ನು ಭೇಟಿ ಮಾಡುವ ಅವಕಾಶವೂ ದೊರೆಯಲಿದೆ. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿದೆ. ಪ್ರತಿದಿನ ಸುಮಾರು 2,500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಪೈ, ಅರವಿಂದ್, ಗಜಾನನ ಪೈ, ರತ್ನಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


