ಚಿರಂಜೀವಿ ಹಾಗೂ ಕಿಂಗ್ ಸ್ಟಾರ್ ಜನಸೇವಾ ಕೇಂದ್ರದಿಂದ ಸಡಗರದ ಓಣಂ ಆಚರಣೆ

ಕುಂಬಳೆ: ಚಿರಂಜೀವಿ (ರಿ.) ಕುಂಬಳೆ ಹಾಗೂ ಕಿಂಗ್ ಸ್ಟಾರ್ ಜನಸೇವಾ ಕೇಂದ್ರ, ಕುಂಬಳೆ ಇವರ ಸಂಯುಕ್ತ ಆಶ್ರಯದಲ್ಲಿ ಓಣಂ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಆಗಸ್ಟ್ 23ರಂದು ಚಿರಂಜೀವಿ ಕ್ಲಬ್ ಸಮೀಪ ನಡೆದ ಕಾರ್ಯಕ್ರಮದಲ್ಲಿ ಆಕರ್ಷಕ ಹೂ ರಂಗವಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಮನರಂಜನಾ ಸ್ಪರ್ಧೆಗಳು ಗಮನ ಸೆಳೆದವು. ಚಿರಂಜೀವಿ ಹಾಗೂ ಕಿಂಗ್ ಸ್ಟಾರ್ ನ ಮಹಿಳಾ ಸದಸ್ಯರು ಪ್ರಸ್ತುತಪಡಿಸಿದ ಸಾಂಪ್ರದಾಯಿಕ ತಿರುವಾತಿರಕಳಿ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಕಿಂಗ್ ಸ್ಟಾರ್ ಜನಸೇವಾ ಕೇಂದ್ರದ ಮಾಲೀಕ ಕೆ.ಸಿ. ಮೋಹನ್, ಚಿರಂಜೀವಿ ಕುಂಬಳೆಯ ಅಧ್ಯಕ್ಷ ಬಾಲಕೃಷ್ಣ ಗಟ್ಟಿ, ಕಾರ್ಯದರ್ಶಿ ಕೃಷ್ಣ ಕುಂಬಳೆ, ದೀಪಕ್ ಆಟೋಮೊಬೈಲ್ಸ್‌ನ ಮಾಲೀಕ ದೀಪಕ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಪೆರ್ನೆ ಶ್ರೀ ಭಗವತಿ ಕ್ಷೇತ್ರ ವಾಣಿಯ ಸಮುದಾಯದ ಗುರಿಕಾರ ರಮೇಶ, ಜಯಪ್ರಕಾಶ ಬಂಬ್ರಾಣ, ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಮಮತಾ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಸಾಮಾಜಿಕ ಸೇವೆಗೆ ಆದ್ಯತೆ

ಓಣಂ ಆಚರಣೆಯ ಸಂಭ್ರಮದ ಜೊತೆಗೆ ಸಾಮಾಜಿಕ ಸೇವೆಯ ಸಂದೇಶವನ್ನೂ ಸಾರಲಾಯಿತು. ಕ್ಯಾನ್ಸರ್ ಪೀಡಿತ ಬಡ ಕುಟುಂಬಗಳಿಗೆ ಚಿರಂಜೀವಿ ಹಾಗೂ ಕಿಂಗ್ ಸ್ಟಾರ್ ಕೇಂದ್ರದ ವತಿಯಿಂದ ಧನ ಸಹಾಯ ನೀಡಲಾಯಿತು.

ಸೌಹಾರ್ದತೆಯ ಸಂದೇಶ ಸಾರಿದ ಓಣಂ ಔತಣ

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಾಂಪ್ರದಾಯಿಕ ಓಣಂ ಸದ್ಯಾ (ಓಣಂ ಔತಣ) ಆಯೋಜಿಸಲಾಗಿತ್ತು. ಸದಸ್ಯರು ಹಾಗೂ ಕುಟುಂಬಸ್ಥರು ಒಟ್ಟಾಗಿ ಹಬ್ಬದ ಸಂತಸ ಹಂಚಿಕೊಂಡರು. ಮಹಿಳೆಯರು ಮತ್ತು ಮಕ್ಕಳಿಗಾಗಿ ಆಯೋಜಿಸಿದ್ದ ವಿವಿಧ ಮನರಂಜನಾ ಆಟಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ಸಾಹ ತುಂಬಿದವು.
ಸಂಘಟನೆಯ ಮೂಲಕ ಪರಸ್ಪರ ಸೌಹಾರ್ದ, ಕುಟುಂಬ ಬಾಂಧವ್ಯ ಹಾಗೂ ಸಹೋದರತ್ವವನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾದ ಓಣಂ ಆಚರಣೆಯಲ್ಲಿ ನೂರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮವನ್ನು ಚೈತ್ರ ನಿರೂಪಿಸಿದರು. ಸಂಸ್ಥೆಯ ಸಹ ಕಾರ್ಯದರ್ಶಿ ಚಂದ್ರಾವತಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಂದ್ಯಾ ರಾಜೇಶ್ ವಂದನಾರ್ಪಣೆ ಸಲ್ಲಿಸಿದರು.
ಹಬ್ಬದ ಸಡಗರ, ಸಾಂಸ್ಕೃತಿಕ ವೈವಿಧ್ಯ ಹಾಗೂ ಸಾಮಾಜಿಕ ಕಾಳಜಿಯೊಂದಿಗೆ ನಡೆದ ಓಣಂ ಆಚರಣೆ ಯಶಸ್ವಿಯಾಗಿ ನೆರವೇರಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!