ಕಾರ್ಮಿಕರ 11 ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಆ.18ರಂದು ಮಂಗಳೂರಿನಲ್ಲಿ ಬಿಎಂಎಸ್ ಪ್ರತಿಭಟನೆ ……!

ಮಂಗಳೂರು:ಕಾರ್ಮಿಕರ ನ್ಯಾಯಯುತ ಹಕ್ಕುಗಳು ಹಾಗೂ ರಾಷ್ಟ್ರಮಟ್ಟದ 11 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರು ಸಂಘ (ಬಿಎಂಎಸ್) ನೇತೃತ್ವದಲ್ಲಿ ದೇಶವ್ಯಾಪಿ ನಡೆಯಲಿರುವ ಪ್ರತಿಭಟನೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಎಂಎಸ್ ವತಿಯಿಂದ ಆ.18ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಬಿಎಂಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌ ಯು. ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಕಾರ್ಮಿಕರ ದೀರ್ಘಕಾಲದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.17ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದು ನಾಗರ ಪಂಚಮಿ ಧಾರ್ಮಿಕ ಆಚರಣೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಭಟನೆಯನ್ನು ಆ.18ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕಾರ್ಮಿಕರಿಗೆ ಸಮರ್ಪಕ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ, ಉದ್ಯೋಗ ಭದ್ರತೆ, ಗೌರವಯುತ ಜೀವನ ಹಾಗೂ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಇಎಸ್‌ಐಸಿ ವೇತನ ಮಿತಿಯನ್ನು ₹42 ಸಾವಿರಕ್ಕೆ ಹೆಚ್ಚಿಸುವುದು, ಇಪಿಎಸ್‌-95 ಕನಿಷ್ಠ ಪಿಂಚಣಿಯನ್ನು ₹7,500ಕ್ಕೆ ಹೆಚ್ಚಿಸುವುದು, ಇಪಿಎಫ್‌ ವೇತನ ಮಿತಿಯನ್ನು ₹30 ಸಾವಿರಕ್ಕೆ ಹೆಚ್ಚಿಸುವುದು, ಬೋನಸ್‌ ಲೆಕ್ಕಾಚಾರದ ವೇತನ ಮಿತಿಯನ್ನು ₹18 ಸಾವಿರಕ್ಕೆ ಹೆಚ್ಚಿಸುವುದು, ಬೋನಸ್‌ ಅರ್ಹತಾ ವೇತನ ಮಿತಿಯನ್ನು ₹42 ಸಾವಿರಕ್ಕೆ ಹೆಚ್ಚಿಸುವುದು, ಆಶಾ ಹಾಗೂ ಅಂಗನವಾಡಿ ಸೇರಿದಂತೆ ಯೋಜನಾ ನೌಕರರ ಗೌರವಧನ ಹೆಚ್ಚಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸುವುದು, ಶ್ರಮ ಸಂಹಿತೆಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವುದು, ಬ್ಯಾಂಕ್‌ ನೌಕರರಿಗೆ ವಾರದಲ್ಲಿ ಐದು ದಿನಗಳ ಕೆಲಸ ಜಾರಿಗೊಳಿಸುವುದು, ಗ್ರಾಚ್ಯುಟಿ ಗರಿಷ್ಠ ಮಿತಿಯನ್ನು ₹40 ಲಕ್ಷಕ್ಕೆ ಹೆಚ್ಚಿಸುವುದು ಹಾಗೂ ರಾಷ್ಟ್ರೀಯ ಕನಿಷ್ಠ ಮಾಸಿಕ ವೇತನವನ್ನು ₹30 ಸಾವಿರಕ್ಕೆ ನಿಗದಿಪಡಿಸುವುದು ಸೇರಿದಂತೆ 11 ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳೊಂದಿಗೆ ತಕ್ಷಣ ಮಾತುಕತೆ ನಡೆಸಿ ಬೇಡಿಕೆಗಳ ಕುರಿತು ಸ್ಪಷ್ಟ ಹಾಗೂ ಕಾಲಮಿತಿಯೊಳಗಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಸತೀಶ್‌ ಶೆಟ್ಟಿ, ಗೋಪಾಲಕೃಷ್ಣ,ವಸಂತ ಕುಮಾರ್‌ , ಗೀತಾ ಧರ್ಮರಾಜ್‌, ನಳಿನಿ ಅಡ್ಯಾರು, ಸಹಿತ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!