ನಗರದೆಲ್ಲೆಡೆ ಪಾಲಿಕೆ ಆಯುಕ್ತರ ಪರಿಶೀಲನೆ

ಮಂಗಳೂರು, ಆ.13: ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ರಸ್ತೆ, ರಸ್ತೆ ವಿಭಾಜಕಗಳು ಹಾಗೂ ಕಾಲುದಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಕಾವೂರು, ಕೂಳೂರು, ಬಲ್ಮಠ ಹಾಗೂ ಕಂಕನಾಡಿ ಪ್ರದೇಶಗಳಿಗೆ ಭೇಟಿ ನೀಡಿದ ಆಯುಕ್ತರು, ಮೂಲಸೌಕರ್ಯಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದರು.

ಇದೇ ವೇಳೆ ನಿರ್ಮಾಣ ಹಂತದಲ್ಲಿರುವ ಕಂಕನಾಡಿ ಮಾರುಕಟ್ಟೆ ಕಾಮಗಾರಿ ಸ್ಥಳಕ್ಕೂ ಭೇಟಿ ನೀಡಿ, ಕಾಮಗಾರಿಯ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಗರಾಭಿವೃದ್ಧಿ ಯೋಜನೆ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಯೋಜನೆಯ ವಿವರಗಳನ್ನು ನೀಡಿದರು.

ಕಾಮಗಾರಿಗಳ ಗುಣಮಟ್ಟ ಮತ್ತು ಪ್ರಗತಿಗೆ ಸಂಬಂಧಿಸಿದಂತೆ ಅಗತ್ಯ ನಿರ್ದೇಶನ ನೀಡಿದ ಆಯುಕ್ತರು, ಮುಂದಿನ ಕಾರ್ಯಯೋಜನೆ ಕುರಿತು ಸಂಬಂಧಿತ ಇಲಾಖೆಗಳೊಂದಿಗೆ ಶೀಘ್ರದಲ್ಲೇ ಸಭೆ ನಡೆಸುವುದಾಗಿ ತಿಳಿಸಿದರು.

ಬಳಿಕ ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಅವರು, ನಗರದ ಅಭಿವೃದ್ಧಿ ಹಾಗೂ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಮಾಧ್ಯಮಗಳು ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.

ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳನ್ನು ಪರಿಣಾಮಕಾರಿಯಾಗಿ ಮುನ್ನೆಲೆಗೆ ತರಲು ಮಾಧ್ಯಮಗಳ ಸಹಕಾರ ಅಗತ್ಯ. ನಾಗರಿಕರ ಸಮಸ್ಯೆಗಳಿಗೆ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರ ಕಲ್ಪಿಸಲು ಆಡಳಿತ ಮತ್ತು ಮಾಧ್ಯಮಗಳ ನಡುವಿನ ಸಮನ್ವಯ ಅತ್ಯಗತ್ಯ ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!