ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯಿತಿನ ನೇತೃತ್ವದಲ್ಲಿ ಅದ್ದೂರಿ ಓಣಂ ಆಚರಣೆ ಕಾರ್ಯಕ್ರಮ ಆಯೋಜಿಸಲಾಯಿತು. ಗ್ರಾಮದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹರಿತ ಕರ್ಮ ಸೇನಾ ಸದಸ್ಯರನ್ನು ಸನ್ಮಾನಿಸಿ, ವಿಶೇಷ ಓಣಂ ಉಡುಗೊರೆಗಳನ್ನು ನೀಡಿದ ಈ ಆಚರಣೆ ಗಮನ ಸೆಳೆಯಿತು.

ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಅವರು ಹರಿತ ಕರ್ಮ ಸೇನಾ ಸದಸ್ಯರಿಗೆ ಓಣಂ ಉಡುಗೊರೆಗಳನ್ನು ವಿತರಿಸಿದರು. ಮಳೆ-ಬಿಸಿಲನ್ನು ಲೆಕ್ಕಿಸದೆ ಮಂಗಲ್ಪಾಡಿ ಪಂಚಾಯಿತಿನ ಸ್ವಚ್ಛತಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹರಿತ ಕರ್ಮ ಸೇನಾ ಸದಸ್ಯರ ಸೇವೆಯನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ಲಾಘಿಸಲಾಯಿತು.

ಹೊಸ ಆಡಳಿತ ಸಮಿತಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಶೇ.50ಕ್ಕಿಂತ ಕಡಿಮೆಯಿದ್ದ ಹರಿತ ಕರ್ಮ ಸೇನೆಯ ಕಾರ್ಯಪ್ರಗತಿ, ಆಡಳಿತ ಸಮಿತಿ ಹಾಗೂ ಸಾರ್ವಜನಿಕರ ಸಹಕಾರ ಮತ್ತು ಸೇನಾ ಸದಸ್ಯರ ಪ್ರಾಮಾಣಿಕ ಸೇವೆಯಿಂದಾಗಿ ಶೇ.99.9ಕ್ಕೆ ತಲುಪಿದೆ ಎಂದು ಪಂಚಾಯತ್ ಅಧ್ಯಕ್ಷರು ಹೇಳಿದರು. ಮಂಗಲ್ಪಾಡಿಯ ಸ್ವಚ್ಛತಾ ಕಾರ್ಯದಲ್ಲಿ ಸಾಧಿಸಿರುವ ಈ ಪ್ರಗತಿ ಮಾದರಿಯಾಗಿದೆ ಎಂದು ಅವರು ತಿಳಿಸಿದರು.

ಮಂಗಲ್ಪಾಡಿ ಪ್ರದೇಶದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಮಾಜಿ ಎಸ್.ಪಿ. ಟಿ.ಪಿ. ರಂಜಿತ್ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹರಿತ ಕರ್ಮ ಸೇನಾ ಸದಸ್ಯರ ಸೇವೆಯನ್ನು ಶ್ಲಾಘಿಸಿದರು.
ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಸಂದರ್ಭದಲ್ಲಿಯೂ ಗ್ರಾಮದ ಸ್ವಚ್ಛತೆಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಹರಿತ ಕರ್ಮ ಸೇನಾ ಸದಸ್ಯರಿಗೆ ಬೆಂಬಲ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದರು.

ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಹರಿತ ಕರ್ಮ ಸೇನೆಗೆ ಹಸ್ತಾಂತರಿಸುವಂತೆ ಹಾಗೂ ಪಂಚಾಯಿತಿಯ ಸ್ವಚ್ಛತಾ ಕಾರ್ಯಗಳಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಆಡಳಿತ ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ಹರಿತ ಕರ್ಮ ಸೇನಾ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಅವರು ಎಲ್ಲರಿಗೂ ಹೃದಯಪೂರ್ವಕ ಓಣಂ ಶುಭಾಶಯಗಳನ್ನು ಕೋರಿದರು.



