ಮಂಗಳೂರು: ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಬಳಿಕ, ಮೈದಾನ ಅಶುದ್ಧಗೊಂಡಿದೆ ಎಂಬ ಅಸಾಂವಿಧಾನಿಕ ಹಾಗೂ ಅವಮಾನಕಾರಿ ಹೇಳಿಕೆ ನೀಡಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಶುದ್ಧೀಕರಣ ನಡೆಸಿರುವುದನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ.

ದಲಿತರು ಹಾಗೂ ಶೋಷಿತ ಸಮುದಾಯದ ನಾಯಕರನ್ನು ಅವಮಾನಿಸುವಂತಹ ಮನೋಭಾವ ಪ್ರಜಾಪ್ರಭುತ್ವ ಮತ್ತು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಗೌರವ ಮತ್ತು ಹಕ್ಕುಗಳನ್ನು ನೀಡಿರುವ ಸಂದರ್ಭದಲ್ಲಿ, ಸಾರ್ವಜನಿಕವಾಗಿ ಇಂತಹ ತಾರತಮ್ಯದ ನಡೆ ಪ್ರದರ್ಶಿಸುವುದು ಅತ್ಯಂತ ಖಂಡನೀಯ. ದೇಶದ ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾದ ಇಂತಹ ಘಟನೆಗಳು ಸಮಾಜದಲ್ಲಿ ಆತಂಕ ಮೂಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

“ವಿಶ್ವಗುರು” ಎಂದು ಹೇಳಿಕೊಳ್ಳುವ ದೇಶದಲ್ಲಿ ಜಾತಿ ಮತ್ತು ಅಸ್ಪೃಶ್ಯತೆಯ ಮನೋಭಾವಕ್ಕೆ ಇನ್ನೂ ಅವಕಾಶವಿರುವುದು ದುರದೃಷ್ಟಕರ. ಮಹಾನ್ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವದ ಮೌಲ್ಯಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಬಳಸಿಕೊಳ್ಳುವ ಮನೋಭಾವವನ್ನು ಜನರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

