ಕಾಸರಗೋಡು: ನೆಲ್ಲಿಕುಂಜೆ ಬಂಗರಗುಡ್ಡೆಯಲ್ಲಿ ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಹೊಂಡಕ್ಕೆ ಮಗುಚಿದೆ. ಆದರೆ ಅದೃಷ್ಟವಶಾತ್ ಭಾರೀ ದುರಂತ ತಪ್ಪಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೆಲ್ಲಿಕುಂಜೆ ಅನ್ವಾರುಲ್ ಉಲೂಂ ಎಯುಪಿ ಶಾಲೆಯ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಯಿತು. ಈ ಬಸ್‌ನಲ್ಲಿ ಸಮೀಪದ ತಂಬಳ್ ಉಪ್ಪಾಪ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ಮತ್ತು ಯುಕೆಜಿ ಕಂದಮ್ಮಗಳೂ ಇದ್ದರು.ಬಂಗರಗುಡ್ಡೆ ರಸ್ತೆ ಹಾನಿಗೀಡಾಗಿ ತಿಂಗಳುಗಳೇ ಕಳೆದಿದ್ದು, ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿವೆ.

ಅಲ್ಲದೆ ಕಾಡುಪೊದೆಗಳು ರಸ್ತೆಗೆ ವಾಲಿ ನಿಂತಿವೆ. ಈ ಹೊಂಡ ಹಾಗೂ ಪೊದೆಗಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಮಕ್ಕಳಿಗೂ ಯಾವುದೇ ಗಾಯಗಳಾಗದಿರುವುದು ಎಲ್ಲರಲ್ಲೂ ನಿಟ್ಟುಸಿರು ಬಿಡುವಂತೆ ಮಾಡಿದೆ.


