ಮಂಗಳೂರು: ಆದಾಯ ಮಿತಿಯ ನೆಪವೊಡ್ಡಿ ಕಳೆದ ಏಪ್ರಿಲ್‌ನಿಂದ ದಿವ್ಯಾಂಗರ ಪಿಂಚಣಿಯನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿರುವುದರಿಂದ ದಿವ್ಯಾಂಗರು ಹಾಗೂ ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ದಿವ್ಯಾಂಗರನ್ನು ಎಪಿಎಲ್ ಅಥವಾ ಬಿಪಿಎಲ್ ಎಂದು ಪರಿಗಣಿಸದೆ, ಅವರ ದಿವ್ಯಾಂಗತೆಯನ್ನೇ ಮಾನದಂಡವಾಗಿರಿಸಿಕೊಂಡು ಎಲ್ಲ ದಿವ್ಯಾಂಗರಿಗೂ ತಕ್ಷಣ ಪಿಂಚಣಿ ನೀಡಬೇಕು ಎಂದು ವಿಶೇಷ ಚೇತನರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆ ‘ಸಕ್ಷಮ’ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಗ್ರಹಿಸಿದೆ.

ರಾಜ್ಯದಲ್ಲಿ ಎಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ದಿವ್ಯಾಂಗರಿಗೆ ಅರ್ಹವಾಗಿ ದೊರಕಬೇಕಿದ್ದ ಸರಕಾರದ ಪಿಂಚಣಿ ಹಾಗೂ ಮಾಸಾಶನ ಸ್ಥಗಿತಗೊಂಡಿದೆ. ದೈಹಿಕ ಹಾಗೂ ಬೌದ್ಧಿಕ ವೈಕಲ್ಯ ಹೊಂದಿರುವ ಮಕ್ಕಳನ್ನು ಸಾಕುತ್ತಿರುವ ಕುಟುಂಬಗಳಿಗೆ ಸರಕಾರ ನೀಡುವ ಸಣ್ಣ ಮೊತ್ತದ ಮಾಸಾಶನವೂ ದೊಡ್ಡ ನೆರವಾಗುತ್ತದೆ. ಆದರೆ ಇಂದಿನ ಕಾಲಘಟ್ಟದಲ್ಲೂ ಮಾಸಾಶನ ಪಡೆಯಲು ಗರಿಷ್ಠ ವಾರ್ಷಿಕ ಆದಾಯ ಮಿತಿಯನ್ನು ಕೇವಲ ₹32,000ಕ್ಕೆ ಸೀಮಿತಗೊಳಿಸಿ ಸೌಲಭ್ಯ ನಿರಾಕರಿಸುವುದು ಸರಿಯಲ್ಲ ಎಂದು ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೌದ್ಧಿಕ ಹಾಗೂ ದೈಹಿಕ ವೈಕಲ್ಯ ಹೊಂದಿರುವವರ ಪೋಷಣೆ, ಆರೈಕೆ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳುವುದು ಇಂದಿನ ದೊಡ್ಡ ಸವಾಲಾಗಿದೆ. ದಿವ್ಯಾಂಗ ಮಕ್ಕಳಿಗೆ ಮಾತಿನ ತರಬೇತಿ, ವರ್ತನಾ ತರಬೇತಿ, ಫಿಸಿಯೋಥೆರಪಿ, ಆಕ್ಯುಪೇಶನಲ್ ಥೆರಪಿ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ಪೋಷಕರು ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ ಎಂದರು.

ಸಾಮಾಜಿಕ ತಾತ್ಸಾರಕ್ಕೆ ಒಳಗಾಗುವ ದಿವ್ಯಾಂಗ ಮಕ್ಕಳ ಪೋಷಕರು ಸಮಾಜದ ಮುಂದೆ ಆತ್ಮವಿಶ್ವಾಸದಿಂದ ನಿಲ್ಲುವಂತೆ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜವೂ ದಿವ್ಯಾಂಗರ ಕುಟುಂಬಗಳೊಂದಿಗೆ ನಿಲ್ಲಬೇಕು. ಸರಕಾರ ಆದಾಯ ಮಿತಿಯನ್ನು ಹೇರಿ ಪಿಂಚಣಿ ಹಾಗೂ ಮಾಸಾಶನವನ್ನು ಸ್ಥಗಿತಗೊಳಿಸುವುದು ದಿವ್ಯಾಂಗರ ಭವಿಷ್ಯಕ್ಕೆ ಕೊಡಲಿಯೇಟು ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.
ದಿವ್ಯಾಂಗರಲ್ಲಿರುವ ವೈಕಲ್ಯವೇ ಪಿಂಚಣಿ, ಮಾಸಾಶನ ಹಾಗೂ ಪ್ರೋತ್ಸಾಹಧನ ಪಡೆಯಲು ಮಾನದಂಡವಾಗಬೇಕು. ಈ ಕುರಿತು ಸರಕಾರ ಸ್ಪಷ್ಟ ಗ್ಯಾರಂಟಿ ನೀಡಬೇಕು ಎಂದು ರಾಜಶೇಖರ ಭಟ್ ಕಾಕುಂಜೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಕ್ಷಮ ದ.ಕ. ಜಿಲ್ಲಾ ಕಾರ್ಯದರ್ಶಿ *ಹರೀಶ್ ಪ್ರಭು, ಉಪಾಧ್ಯಕ್ಷ **ಗಣೇಶ್ ಭಟ್ ವಾರಣಾಸಿ, ಜತೆ ಕಾರ್ಯದರ್ಶಿ **ಭಾಸ್ಕರ ಹೊಸಮನೆ, ಮಹಿಳಾ ಆಯಾಮ ಪ್ರಮುಖ್ **ಗೀತಾ ಲಕ್ಷ್ಮೇಶ್, ಬಂಟ್ವಾಳ ತಾಲೂಕು ಪ್ರತಿನಿಧಿ *ಹರೀಶ್ ಮಾಂಬಾಂಡಿ ಹಾಗೂ ದಿವ್ಯಾಂಗ ಪ್ರತಿನಿಧಿ ಸುಧಾರತ್ನ ಉಪಸ್ಥಿತರಿದ್ದರು.

