ಮಂಗಳೂರು: ನಕಲಿ ಔಷಧಗಳ ಜಾಲ ಅತ್ಯಂತ ಗಂಭೀರವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಈ ಜಾಲ ಕೇವಲ ರಾಮನಗರ ಜಿಲ್ಲೆ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅನಧಿಕೃತವಾಗಿ ಔಷಧ ತಯಾರಿಸಿ, ಅವುಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೆಲವು ಫಾರ್ಮಸಿಗಳಲ್ಲಿ ₹10 ಸಾವಿರ ಮೌಲ್ಯದ ಔಷಧವನ್ನು ₹5 ಸಾವಿರಕ್ಕೆ ನೀಡುವುದಾಗಿ ಹೇಳಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮತ್ತಷ್ಟು ಆತಂಕಕಾರಿ ಸಂಗತಿಯೆಂದರೆ, ಐಸಿಯು ಹಾಗೂ ತುರ್ತು ಚಿಕಿತ್ಸಾ ಘಟಕಗಳಲ್ಲಿ ಬಳಸುವ ಜೀವ ರಕ್ಷಕ ಔಷಧಗಳೂ ನಕಲಿಯಾಗಿರುವುದು ಪತ್ತೆಯಾಗಿದೆ ಎಂದರು.

ಒಂದೇ ಸ್ಥಳದಲ್ಲಿ ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಗಳು ಪತ್ತೆಯಾಗಿರುವುದು, ಇದರ ಹಿಂದೆ ದೊಡ್ಡ ಮಟ್ಟದ ಜಾಲವಿರುವುದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳ ನಿರ್ದೇಶನದಂತೆ ಗೃಹ ಸಚಿವ ಪರಮೇಶ್ವರ್ ಅವರು ಪೊಲೀಸ್ ಇಲಾಖೆ ಹಾಗೂ ಡ್ರಗ್ ಕಂಟ್ರೋಲ್ ಅಧಿಕಾರಿಗಳನ್ನು ಒಳಗೊಂಡ ಎಸ್ಐಟಿ ತಂಡ ರಚಿಸಿದ್ದಾರೆ ಎಂದು ತಿಳಿಸಿದರು.
ಜಾಲದ ಪ್ರಮುಖ ರೂವಾರಿ ಪ್ರಶಾಂತ್ ದುಬೈನಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹಿಮಾಚಲ ಪ್ರದೇಶದಿಂದ ಔಷಧಗಳನ್ನು ಯಾವ ಮಾರ್ಗದಲ್ಲಿ ತರಲಾಗುತ್ತಿದೆ, ರಾಜ್ಯದಲ್ಲಿ ಯಾರು ವಿತರಿಸುತ್ತಿದ್ದಾರೆ ಹಾಗೂ ಯಾವ ಫಾರ್ಮಸಿಗಳು ಮತ್ತು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಯುತ್ತಿದೆ ಎಂದು ಯು.ಟಿ. ಖಾದರ್ ಹೇಳಿದರು.

