ಕಾಸರಗೋಡು : ಹೊಸದುರ್ಗ ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯವು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ 6 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ 30,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಬಾಳೆಹೊಸೂರು ನಿವಾಸಿ ಹೇಲಪ್ಪ ಸುಬ್ಬಣ್ಣ ಇರೆಗಾರ (36) ಶಿಕ್ಷೆಗೊಳಗಾದ ಆರೋಪಿ. 2025ರ ಜುಲೈ 16ರಂದು ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

ಈ ಕುರಿತು ಬಾಲಕಿಯ ದೂರಿನ ಮೇರೆಗೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ದಂಡದ ಹಣ ಪಾವತಿಸಲು ವಿಫಲವಾದರೆ ಆರೋಪಿಯು ಹೆಚ್ಚುವರಿಯಾಗಿ ಮತ್ತೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶರಾದ ಪಿ.ಎಂ. ಸುರೇಶ್ ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

