ಸಾಲೆತ್ತೂರು: ಕೊಳ್ನಾಡು ಗ್ರಾಮದ ಸಾಲೆತ್ತೂರು ಪೇಟೆಯಲ್ಲಿ ಅಲೆಮಾರಿಯಾಗಿ, ಅನಾಥನಂತೆ ತಿರುಗಾಡುತ್ತಿದ್ದ ಯುವಕನಿಂದ ಸ್ಥಳೀಯ ವರ್ತಕರು ಹಲವು ದಿನಗಳಿಂದ ತೊಂದರೆ ಅನುಭವಿಸುತ್ತಿದ್ದರು. ಅಂಗಡಿ ಮಾಲೀಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಯುವಕ, ಕೆಲ ಸಂದರ್ಭಗಳಲ್ಲಿ ಗಲಾಟೆಗೂ ಮುಂದಾಗುತ್ತಿದ್ದ ಎನ್ನಲಾಗಿದೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸಾಮಾಜಿಕ ಮುಖಂಡ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಮಧ್ಯಪ್ರವೇಶಿಸಿ ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ, ಯುವಕ ವಿದ್ಯಾವಂತನಾಗಿದ್ದು, ಕೆಲವು ಪರಿಸ್ಥಿತಿಗಳ ಕಾರಣದಿಂದ ಅನಾಥನಂತೆ ಅಲೆದಾಡುತ್ತಿದ್ದ ನತದೃಷ್ಟನಾಗಿರುವುದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಕೇವಲ ಕಾನೂನು ಕ್ರಮದ ಮೂಲಕ ಬಗೆಹರಿಸುವ ಬದಲು ಮಾನವೀಯ ದೃಷ್ಟಿಕೋನದಿಂದ ಪರಿಹರಿಸಲು ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮುಂದಾದರು. ಪತ್ರಕರ್ತ ವಿ.ಟಿ. ಪ್ರಸಾದ್ ಅವರ ಸಹಕಾರದೊಂದಿಗೆ ಯುವಕನನ್ನು ಡಾ. ಉದಯ್ ಅವರ ದೈಗೋಳಿಯ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಲಾಯಿತು.
ಸಾಮಾಜಿಕ ಮುಖಂಡ ಪವಿತ್ರ ಪೂಂಜಾ ಅವರೂ ಈ ಕಾರ್ಯಕ್ಕೆ ಕೈಜೋಡಿಸಿದರು. ಇದೀಗ ಯುವಕನಿಗೆ ಆಶ್ರಯ ಹಾಗೂ ಆರೈಕೆಯೊಂದಿಗೆ ಹೊಸ ಬದುಕಿನ ದಾರಿ ದೊರೆತಿದೆ.

ಯುವಕನಿಂದ ತೊಂದರೆಗೊಳಗಾಗಿದ್ದ ಸಾಲೆತ್ತೂರು ಪೇಟೆಯ ವರ್ತಕರ ಸಮಸ್ಯೆಗೆ ಶಾಶ್ವತ ಹಾಗೂ ಮಾನವೀಯ ಪರಿಹಾರ ಕಂಡುಕೊಳ್ಳಲು ಮುಂದಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮಸ್ಯೆಯ ಹಿಂದೆ ಅಡಗಿದ್ದ ವ್ಯಕ್ತಿಯ ಬದುಕಿನ ನೋವನ್ನು ಗುರುತಿಸಿ, ಆತನಿಗೆ ಪುನರ್ವಸತಿಯ ಅವಕಾಶ ಕಲ್ಪಿಸಿರುವುದು ಮಾನವೀಯತೆಗೆ ಮಾದರಿಯಾಗಿದೆ.

