ಅಂತರ್ ರಾಜ್ಯ ಕಳ್ಳತನ ಪ್ರಕರಣದ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ದಿನಾಂಕ:19-06-2026 ರಿಂದ ದಿನಾಂಕ:20-06-2026 ರ ಅವಧಿಯಲ್ಲಿ ನಡೆದ ಓಮ್ನಿ ಕಾರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ.ಕ್ರ: 94/2026, 303(2)BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ್ ರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಗುಣಪಾಲ ಜೆ ಪಿಎಸ್ಐ ಮತ್ತು ಸುಷ್ಮಾ.ಜಿ ಭಂಡಾರಿ ನೇತೃತ್ವದ ತನಿಖಾ ತಂಡವು ಪ್ರಕರಣದ ಪತ್ತೆಗಾಗಿ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತನಿಖೆ ನಡೆಸಿ, ಅಂತರ್ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದ ಕೇರಳ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ (25), ಮೊಹಮ್ಮದ್ ಆಸೀಕ್ (25) ಮೊಹಮ್ಮದ್ ಸಿರಾಜ್ (28) ಹಾಗೂ ತಮಿಳುನಾಡು ಕರೂರು ನಿವಾಸಿ ಶಕ್ತಿವೇಲು ಜಿ (24) ಎಂಬವರನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ಕಳ್ಳತನ ಮಾಡಿದ ಓಮ್ನಿ ಕಾರ್ (2.5 ಲಕ್ಷ ರೂ ಅಂದಾಜು ಮೌಲ್ಯ) ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ಕೆಟಿಎಂ ಬೈಕ್ ನ್ನು (1 ಲಕ್ಷ ಅಂದಾಜು ಮೌಲ್ಯ) ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ವಿಚಾರಣೆಯ ವೇಳೆ ಸದ್ರಿ ಆರೋಪಿಗಳು ಓಮ್ನಿ ಕಾರ್ ನ್ನು ಕದ್ದು, ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ, ಕೇರಳದಿಂದ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡಿ, ತಮಿಳುನಾಡಿನಲ್ಲಿ ಸದ್ರಿ ವಾಹನವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ಕಂಡುಬಂದಿದೆ. ಈ ಆರೋಪಿಗಳು ಮೇಲೆ ಕೇರಳದ ಬದಿಯಡ್ಕ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಕಳ್ಳತನ ಪ್ರಕರಣಗಳು ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ, ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.




