‘ಪುತ್ತೂರು ಚಲೋ’ ಸವಾಲಿಗೆ ಪ್ರತಿಭಾ ಕುಳಾಯಿ ತಿರುಗೇಟು

ಮಂಗಳೂರು: ಬಿಜೆಪಿ ಮುಖಂಡರು ಆಯೋಜಿಸಲು ಉದ್ದೇಶಿಸಿರುವ ‘ಪುತ್ತೂರು ಚಲೋ’ ಕಾರ್ಯಕ್ರಮಕ್ಕೆ ಸಂಬಂಧಿಸಿ ತನಗೆ ಸವಾಲು ಹಾಕಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಮಹಿಳೆಗೆ ಅನ್ಯಾಯವಾದರೂ ತಾನು ಆಕೆಯ ಪರವಾಗಿ ನಿಲ್ಲುವುದಾಗಿ ಅವರು ಹೇಳಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ‘ಪುತ್ತೂರು ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತಾನು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಸವಾಲು ಹಾಕಿದ್ದಾರೆ. ಆದರೆ ಮಹಿಳೆಯರ ಮೇಲಿನ ಅನ್ಯಾಯದ ವಿಚಾರದಲ್ಲಿ ತನಗೆ ಪ್ರಶ್ನೆ ಕೇಳುವ ನೈತಿಕತೆ ಅವರಿಗೆ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಪೂಜಾ ಎಂಬ ಮಹಿಳೆಗೆ ಅನ್ಯಾಯ ಎಸಗಿರುವ ಆರೋಪದ ಪ್ರಕರಣವನ್ನು ಉಲ್ಲೇಖಿಸಿದ ಪ್ರತಿಭಾ ಕುಳಾಯಿ, ಈ ಸಂದರ್ಭದಲ್ಲಿ ಸಂತ್ರಸ್ತೆಗೆ ಸೂಕ್ತ ಬೆಂಬಲ ದೊರೆತಿಲ್ಲ ಎಂದು ದೂರಿದರು.

“ಪೂಜಾ ಅವರು ನ್ಯಾಯಕ್ಕಾಗಿ ಹಲವರ ಮನೆಗಳಿಗೆ ಅಲೆದಾಡಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರ ಮನೆಗಳಿಗೆ ತೆರಳಿ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಅವರ ಪರವಾಗಿ ಯಾವುದೇ ರೀತಿಯ ಪ್ರತಿಭಟನೆ ಅಥವಾ ಹೋರಾಟ ನಡೆಯಲಿಲ್ಲ. ಯಾವುದೇ ಸೂಕ್ತ ಸಹಾಯವೂ ದೊರೆಯಲಿಲ್ಲ” ಎಂದು ಆರೋಪಿಸಿದರು.

ಈಗ ಕೋಮು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಸಣ್ಣ ವಿಚಾರವೊಂದನ್ನು ದೊಡ್ಡದಾಗಿ ಬಿಂಬಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ ಎಂದು ಅವರು ಟೀಕಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಪಕ್ಷಕ್ಕೆ ಸೇರಿದ ಮಹಿಳೆಗೆ ಅನ್ಯಾಯವಾದರೂ ತಾನು ಆಕೆಯ ಪರವಾಗಿ ನಿಲ್ಲುವುದಾಗಿ ತಿಳಿಸಿದ ಪ್ರತಿಭಾ ಕುಳಾಯಿ, ಪುತ್ತೂರಿನಲ್ಲಿ ಈಗಲೂ ಯಾವುದೇ ಮಹಿಳೆಗೆ ಅನ್ಯಾಯವಾಗಿದ್ದರೆ ಆಕೆಯ ಪರವಾಗಿಯೂ ಹೋರಾಟ ನಡೆಸುವುದಾಗಿ ಹೇಳಿದರು.

‘ಪುತ್ತೂರು ಚಲೋ’ ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಿದರೆ ತಾನೂ ಪ್ರತಿಭಟನೆಯಲ್ಲಿ ಭಾಗವಹಿಸಲು ಸಿದ್ಧಳಿದ್ದೇನೆ. ಆದರೆ ಪ್ರತಿಭಟನೆ ಮುಗಿದ ಬಳಿಕ ಪೂಜಾ ಅವರಿಗೆ ಆಗಿರುವ ಅನ್ಯಾಯದ ವಿರುದ್ಧವೂ ಹೋರಾಟ ನಡೆಸಬೇಕು. ಜಗನ್ನಿವಾಸ ರಾವ್ ಅವರ ಮನೆಗೆ ತೆರಳಿ ಪೂಜಾ ಅವರಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಬೇಕು ಎಂದು ಅವರು ಹೇಳಿದರು.

ಪೂಜಾ ಅವರಿಗೆ ನ್ಯಾಯಾಲಯದ ಮೂಲಕ ಕೆಲವು ತಿಂಗಳಿಂದ ಮಾಸಿಕ 75 ಸಾವಿರ ರೂ. ಹಣ ದೊರೆಯುತ್ತಿದ್ದರೂ, ಹಣ ಮಾತ್ರ ಸಮಸ್ಯೆಗೆ ಪರಿಹಾರವಲ್ಲ. ಅವರ ಜೀವನ ಹಾಗೂ ಮಗುವಿನ ಭವಿಷ್ಯದ ಪ್ರಶ್ನೆ ಮುಖ್ಯವಾಗಿದೆ ಎಂದು ಪ್ರತಿಭಾ ಕುಳಾಯಿ ಹೇಳಿದರು.

“ಪೂಜಾ ಅವರ ಜೀವನ ಮತ್ತು ಮಗುವಿನ ಭವಿಷ್ಯಕ್ಕೆ ಧಕ್ಕೆಯಾಗಿದೆ. ಅವರಿಗೆ ಇನ್ನೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಕೃಷ್ಣ ಜೆ. ರಾವ್ ಅವರು ಪೂಜಾ ಅವರನ್ನು ವಿವಾಹವಾಗುವ ಮೂಲಕ ನ್ಯಾಯ ಒದಗಿಸಬೇಕು. ಈ ಕುರಿತು ಹೋರಾಟ ನಡೆಸುತ್ತಿರುವವರು ಮೊದಲು ಈ ಪ್ರಕರಣವನ್ನು ಪರಿಹರಿಸುವ ಜವಾಬ್ದಾರಿ ವಹಿಸಬೇಕು” ಎಂದು ಅವರು ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!