ಮಂಜೇಶ್ವರ: ಕರ್ನಾಟಕದ ಧರ್ಮಸ್ಥಳದಲ್ಲಿ ಮಲಯಾಳಿಗಳು ಸೇರಿದಂತೆ ನೂರಾರು ಮಹಿಳೆಯರ ಹತ್ಯೆಯಾಗಿರುವ ಬಗ್ಗೆ ಶುಚೀಕರಣ ಕಾರ್ಮಿಕರೊಬ್ಬರು ಬಹಿರಂಗಪಡಿಸಿದ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ವಿಮನ್ ಇಂಡ್ಯಾ ಮೂಮೆಂಟ್ ರಾಜ್ಯ ಖಜಾಂಚಿ ಮಂಜುಷಾ ಮಾವಿಲಾಡಂ ಆಗ್ರಹಿಸಿದರು.
ಧರ್ಮಸ್ಥಳದ ಶುಚೀಕರಣ ಕಾರ್ಮಿಕರೊಬ್ಬರು ಹೇಳುವಂತೆ ಬಾಲಕಿಯರು ಹಾಗೂ ಯುವತಿಯರು ಸೇರಿದಂತೆ 450 ಕ್ಕೂ ಹೆಚ್ಚು ಮಂದಿಯನ್ನು ಕೆಲವು ಜನರ ಸೂಚನೆಯ ಮೇರೆಗೆ ಸಮಾಧಿ ಮಾಡಲಾಗಿದೆ ಎಂದು ಬಹಿರಂಗಪಡಿಸಿರುವುದು ಆಘಾತಕಾರಿ ಸಂಗತಿ . ಕಳೆದ ಕೆಲವು ವರ್ಷಗಳಲ್ಲಿ ನಡೆದ ಲೈಂಗಿಕ ಶೋಷಣೆ, ಕೊಲೆ ಮತ್ತು ಅನೇಕ ಮಹಿಳೆಯರ ಸಮಾಧಿಯ ಭಯಾನಕ ಘಟನೆಯ ಬಗ್ಗೆ ಸರ್ಕಾರ, ಮಾಧ್ಯಮ ಮತ್ತು ಸಾಮಾಜಿಕ ಕಾರ್ಯಕರ್ತರು ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು,
ಇದು ಬಹು ದೊಡ್ಡ ಅಪರಾಧ ಎಂದು ಹೇಳಿದ ಅವರು ದೇಶವನ್ನು ಬೆಚ್ಚಿಬೀಳಿಸಿದ ಧರ್ಮಸ್ಥಳದಲ್ಲಿ ನಡೆದ ಅಪರಾಧಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೌನ ಮುರಿದು ಬಲಿಪಶುಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಧರ್ಮಸ್ಥಳ ಹತ್ಯೆಯ ಸಮಗ್ರ ತನಿಖೆಗೆ ಒತ್ತಾಯಿಸಿ ಹೊಸಂಗಡಿಯಲ್ಲಿ ವಿಮನ್ ಇಂಡ್ಯಾ ಮೂಮೆಂಟ್ ನ ಕಾಸರಗೋಡು ಜಿಲ್ಲಾ ಸಮಿತಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸಂಘಟನೆಯ ಜಿಲ್ಲಾಧ್ಯಕ್ಷೆ ಖಮರುಲ್ ಹಸೀನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿಪಿಐ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಹೊಸಂಗಡಿ, ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಬಡಾಜೆ ಮಾತನಾಡಿದರು. ವಿಮನ್ ಇಂಡ್ಯಾ ಮೂಮೆಂಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೈಹಾನತ್ ಅಬ್ದುಲ್ಲಾ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯೆ ಫಸೀನಾ ಶಬೀರ್ ಧನ್ಯವಾದಗೈದರು