ಸಿಹಿ ತಯಾರಿಕಾ ಘಟಕಗಳ ತಪಾಸಣೆ ತೀವ್ರ: ಎರಡು ಘಟಕ ಬಂದ್; ಯು.ಟಿ. ಖಾದರ್

ಮಂಗಳೂರು:* ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.

ಆಹಾರ ಸುರಕ್ಷತಾ ಇಲಾಖೆ ವತಿಯಿಂದ ವಿವಿಧೆಡೆ ತಪಾಸಣೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಸಿಹಿ ತಯಾರಿಕಾ ಘಟಕವೊಂದರ ಮೇಲೆ ನಡೆಸಿದ ತಪಾಸಣೆಯಲ್ಲಿ ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಎರಡು ಘಟಕಗಳನ್ನು ಬಂದ್ ಮಾಡಲಾಗಿದೆ. ಇನ್ನುಳಿದ ಘಟಕಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅವರಿಂದ ಉತ್ತರ ಬಂದ ಬಳಿಕ ಕಾನೂನು ಪ್ರಕಾರ ದಂಡ ಹಾಗೂ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ಸಚಿವರು ತಿಳಿಸಿದರು.

ತಪಾಸಣಾ ಕಾರ್ಯವನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ಮಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ತೀವ್ರಗೊಳಿಸಲು ಇಲಾಖೆ ನಿರ್ಧರಿಸಿದೆ. ಆಹಾರ ತಯಾರಿಕೆ ಹಾಗೂ ವಿತರಣೆಯಲ್ಲಿ ಸ್ವಚ್ಛತೆ, ಗುಣಮಟ್ಟ ಮತ್ತು ಶುದ್ಧತೆಯನ್ನು ಕಾಪಾಡಬೇಕು. ಯಾವುದೇ ರೀತಿಯ ಕಲಬೆರಕೆ ಕಂಡುಬಂದರೂ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಪಿಜಿ, ಕ್ಯಾಟರಿಂಗ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ

ಪಿಜಿ, ಹಾಸ್ಟೆಲ್ ಹಾಗೂ ಕ್ಯಾಟರಿಂಗ್ ಸಂಸ್ಥೆಗಳು ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಿಜಿ ನಡೆಸುವವರು ಅಲ್ಲಿರುವ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರನ್ನು ತಮ್ಮ ಸ್ವಂತ ಮಕ್ಕಳಂತೆ ಪರಿಗಣಿಸಿ ಗುಣಮಟ್ಟದ ಆಹಾರ ಒದಗಿಸಬೇಕು. ಆಹಾರದ ಗುಣಮಟ್ಟ ಕಾಪಾಡಲು ಸಾಧ್ಯವಾಗದಿದ್ದರೆ ಪಿಜಿ ಆರಂಭಿಸುವ ಅಗತ್ಯವಿಲ್ಲ ಎಂದು ಸಚಿವರು ಕಠಿಣವಾಗಿ ಹೇಳಿದರು.

ಪಿಜಿ ನಡೆಸಲು ಅಗತ್ಯವಿರುವ ಸಹಕಾರವನ್ನು ಇಲಾಖೆ ನೀಡಲಿದೆ. ಆದರೆ ವಿದ್ಯಾರ್ಥಿಗಳ ಆರೋಗ್ಯದೊಂದಿಗೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಅವರು ಸೂಚಿಸಿದರು.

QR ಕೋಡ್ ಮೂಲಕ ದೂರು ನೀಡಲು ಅವಕಾಶ

ಗ್ರಾಹಕರು ಆಹಾರ ಅಥವಾ ಔಷಧಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೇರವಾಗಿ ಇಲಾಖೆಯ ಗಮನಕ್ಕೆ ತರಲು QR ಕೋಡ್ ಹಾಗೂ ಬಾರ್‌ಕೋಡ್ ವ್ಯವಸ್ಥೆ ಜಾರಿಯಲ್ಲಿದೆ. QR ಕೋಡ್ ಸ್ಕ್ಯಾನ್ ಮಾಡಿ ದೂರು ಅಥವಾ ಮಾಹಿತಿ ಸಲ್ಲಿಸಿದರೆ, ಅದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಲುಪಲಿದೆ. ಆಹಾರಕ್ಕೆ ಸಂಬಂಧಿಸಿದ ದೂರುಗಳು ಆಹಾರ ಸುರಕ್ಷತಾ ಇಲಾಖೆಗೆ ಹಾಗೂ ಔಷಧಕ್ಕೆ ಸಂಬಂಧಿಸಿದ ದೂರುಗಳು ಔಷಧ ನಿಯಂತ್ರಣ ಇಲಾಖೆಗೆ ಸ್ವಯಂಚಾಲಿತವಾಗಿ ರವಾನೆಯಾಗಲಿವೆ ಎಂದು ಯು.ಟಿ. ಖಾದರ್ ತಿಳಿಸಿದರು.

ದೂರು ಬಂದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವುದು ಕಡ್ಡಾಯವಾಗಲಿದೆ. ಮಂಗಳೂರಿನಲ್ಲಿ ಈಗಾಗಲೇ QR ಕೋಡ್ ಮೂಲಕ ಬಂದ ದೂರುಗಳ ಆಧಾರದ ಮೇಲೆ ಎರಡು ತಪಾಸಣೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ QR ಕೋಡ್ ವ್ಯವಸ್ಥೆ ಇಲಾಖೆಯ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಫಾರ್ಮಸಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ QR ಕೋಡ್‌ಗಳನ್ನು ಕಡ್ಡಾಯವಾಗಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಹೋಟೆಲ್‌ಗಳಲ್ಲಿ ‘ಹೆಲ್ತ್ ಚಾರ್ಟ್’

ಜನರಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಆಹಾರ ಪದ್ಧತಿಯ ಕುರಿತು ಅರಿವು ಮೂಡಿಸಲು ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಮಾರ್ಗದರ್ಶನ ಸೂಚಿ ಅಥವಾ ‘ಹೆಲ್ತ್ ಚಾರ್ಟ್’ ಅಳವಡಿಸಲು ಇಲಾಖೆ ನಿರ್ಧರಿಸಿದೆ. ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಿರುವ 6ರಿಂದ 8 ಪ್ರಮುಖ ಸಲಹೆಗಳನ್ನು ಒಳಗೊಂಡ ಈ ಚಾರ್ಟ್ ಅನ್ನು ಎಲ್ಲೆಡೆ ಒಂದೇ ಮಾದರಿಯಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಹೇಳಿದರು.

ಆರೋಗ್ಯಪೂರಕ ಹಾಗೂ ಸುರಕ್ಷಿತ ಆಹಾರವನ್ನು ಸಾರ್ವಜನಿಕರಿಗೆ ಒದಗಿಸುವುದೇ ಇಲಾಖೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!