ಜೀವಂತ ವ್ಯಕ್ತಿಯನ್ನೇ ಎಸ್‌ಐಆರ್ ಕರಡು ಪಟ್ಟಿಯಲ್ಲಿ ‘ಮರಣ’ ಎಂದು ನಮೂದು: ಮಂಗಳೂರಿನಲ್ಲಿ ಗೊಂದಲ

ಮಂಗಳೂರು:ಜೀವಂತವಾಗಿರುವ ವ್ಯಕ್ತಿಯೊಬ್ಬರನ್ನು ಎಸ್‌ಐಆರ್ ಕರಡು ಮತದಾರರ ಪಟ್ಟಿಯಲ್ಲಿ ‘ಮರಣ’ ಎಂದು ನಮೂದಿಸಿರುವ ಘಟನೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಬಿಜೈ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೋ ಅವರ ಹೆಸರನ್ನು ಎಸ್‌ಐಆರ್ ಕರಡು ಪಟ್ಟಿಯಲ್ಲಿ ಕೈಬಿಡಲಾಗಿದ್ದು, ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣ ಎಂಬ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಲಾಗಿದೆ.
ಈ ಕುರಿತು ಮಾತನಾಡಿರುವ ಡೊನಾಲ್ಡ್ ಜೋಸೆಫ್ ರೇಗೋ, ತಾನು ಬಿಜೈಯಲ್ಲೇ ಹುಟ್ಟಿ ಬೆಳೆದಿದ್ದು, ಮತದಾರರ ಗುರುತಿನ ಚೀಟಿಯನ್ನೂ ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಕೆಲಕಾಲ ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಬಳಿಕ ಇದೀಗ ಊರಲ್ಲೇ ವಾಸಿಸುತ್ತಿರುವುದಾಗಿ ಹೇಳಿದ್ದಾರೆ.

ಕಳೆದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ, ಇತ್ತೀಚಿನ ಪರಿಶೀಲನೆಯಲ್ಲಿ ‘ನೊ ರೆಕಾರ್ಡ್ಸ್ ಫೌಂಡ್’ ಎಂದು ತೋರಿಸಿದೆ. ಜೊತೆಗೆ, ಗಣತಿ ನಮೂನೆಯನ್ನು ಹಿಂದಿರುಗಿಸದಿರುವುದಕ್ಕೆ ಕಾರಣದ ಕಾಲಂನಲ್ಲಿ ‘ಮರಣ’ ಎಂದು ನಮೂದಿಸಿರುವುದು ಕಂಡುಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಕಚೇರಿಗಳಿಗೆ ಈಗಾಗಲೇ ಎರಡು ಬಾರಿ ಅಲೆದಾಡಿದ್ದು, ಸಮಸ್ಯೆ ಪರಿಹಾರಕ್ಕಾಗಿ ಮತ್ತೆ ಕಚೇರಿಗೆ ತೆರಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಬಾರಿ ತಾವು ಮತ ಚಲಾಯಿಸಿದ್ದರೂ, ಮತದಾರರ ಪಟ್ಟಿಯಲ್ಲಿ ತಮ್ಮನ್ನು ಮೃತ ವ್ಯಕ್ತಿಯೆಂದು ನಮೂದಿಸಿರುವುದು ಹೇಗೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಡೊನಾಲ್ಡ್ ಜೋಸೆಫ್ ರೇಗೋ ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕೈಬಿಟ್ಟು ಹೋಗಿರುವುದು ಬಿ.ಎಲ್.ಒ. ಅವರ ಗಮನಕ್ಕೆ ಬಂದ ತಕ್ಷಣ, 2026ರ ಆಗಸ್ಟ್ 29ರಂದು ಮತದಾರರ ನೋಂದಣಾಧಿಕಾರಿ ಹಾಗೂ ಬಿ.ಎಲ್.ಒ. ಅವರು ಖುದ್ದಾಗಿ ಮತದಾರರನ್ನು ಸಂಪರ್ಕಿಸಿದ್ದಾರೆ.

ಬಳಿಕ ಬಿ.ಎಲ್.ಒ. ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಎಡಿಸಿ ತಿಳಿಸಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 24ರಲ್ಲಿ ಡೊನಾಲ್ಡ್ ಜೋಸೆಫ್ ರೇಗೋ ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!