ಜೋಡುಕಲ್ಲಿನಲ್ಲಿ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಆರೋಪ-ಕಾನೂನು ಪ್ರಕಾರ ಹೋರಾಟಕ್ಕೆ ತೀರ್ಮಾನ: ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್.

ಮಂಜೇಶ್ವರ: ಜೋಡುಕಲ್ಲಿನಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಆರೋಪಿಸಿರುವ ವಿಚಾರ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ, ಮಂಜೇಶ್ವರ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಜೋಡುಕಲ್ಲಿನಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ, ಇಲಾಖೆಯ ಅಸಿಸ್ಟೆಂಟ್ ಎಂಜಿನಿಯರ್ ಶೋಭಾ ಅವರನ್ನು ಕಚೇರಿಯೊಳಗೆ ದಿಗ್ಬಂಧನಗೊಳಿಸಿ ಪ್ರತಿಭಟನೆ ನಡೆಸಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆಯಾಗಿ ನಿನ್ನೆ ಜೋಡುಕಲ್ಲಿನಲ್ಲಿ ಬಿಜೆಪಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡ, ಕಳೆದ 50 ವರ್ಷಗಳಿಂದ ಜೋಡುಕಲ್ಲಿನಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಕಾರ್ಯಕ್ರಮಗಳಿಗೆ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಹಿನ್ನೆಲೆಯಲ್ಲಿ ಈ ಚಪ್ಪರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಚಪ್ಪರ ನಿರ್ಮಾಣವನ್ನು ವಿರೋಧಿಸುತ್ತಿರುವ ಮುಸ್ಲಿಂ ಲೀಗ್ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ ಲೋಕೇಶ್ ನೋಂಡ, ಈ ವಿಚಾರವನ್ನು ಕಾನೂನುಬದ್ಧವಾಗಿ ಎದುರಿಸುವುದಾಗಿ ತಿಳಿಸಿದರು.

ಇನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಮಾತನಾಡಿ, ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಸಿದ್ಧಾಂತವಿದ್ದು, ಯಾರಿಗೂ ತೊಂದರೆ ನೀಡುವ ಉದ್ದೇಶ ಪಕ್ಷಕ್ಕಿಲ್ಲ. ಅದೇ ಉದ್ದೇಶದಿಂದಲೇ ಇಲ್ಲಿ ಚಪ್ಪರ ನಿರ್ಮಿಸಲಾಗಿದೆ. ಆದರೆ, ಮುಸ್ಲಿಂ ಲೀಗ್ ಇಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಸಾದ್ ರೈ ಕಯ್ಯಾರ್, ಶ್ರೀನಿವಾಸ್ ಆಳ್ವ, ಕೆ.ಪಿ. ನಾರಾಯಣ ಪಟ್ಲ, ಕುಂಜ್ಞಣ್ಣ ರೈ ಸೇರಿದಂತೆ ಕಾರ್ಯಕ್ರಮ ಆಯೋಜನಾ ಸಮಿತಿ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!