ಸುಳ್ಯ: ಬೆಳ್ಳಾರೆ ಸರ್ಕಾರಿ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶಿಸಿ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ನೀಡಿದ ದೂರಿನ ಪ್ರಕಾರ, ಸೆಪ್ಟೆಂಬರ್ 2ರಂದು ಬೆಳಿಗ್ಗೆ ವಿದ್ಯಾರ್ಥಿನಿಯರು ಒಣಗಿಸಲು ಹಾಕಿದ್ದ ಕೆಲವು ಬಟ್ಟೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು.

ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೆಳಗಿನ ಜಾವ ಅಪರಿಚಿತ ಯುವಕನೋರ್ವ ವಿದ್ಯಾರ್ಥಿನಿಲಯಕ್ಕೆ ಅತಿಕ್ರಮ ಪ್ರವೇಶಿಸಿ ಬಟ್ಟೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 5ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಪುತ್ತೂರು ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂಬಾತನನ್ನು ಸೆಪ್ಟೆಂಬರ್ 7ರಂದು ಬಂಧಿಸಿದ್ದಾರೆ.
ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ಸೆಪ್ಟೆಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.


