ಎ.ಜೆ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನ ಆಡಿಟೋರಿಯಂ ಉದ್ಘಾಟನೆ

ಮಂಗಳೂರು: ನಗರದ ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೂತನ ಎ.ಜೆ. ಆಡಿಟೋರಿಯಂ ಉದ್ಘಾಟನೆ ಹಾಗೂ ಪದವಿ ಪ್ರದಾನ ಸಮಾರಂಭ ಸೆ. 12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಕ್ಯಾಂಪಸ್ ನಿರ್ದೇಶಕ ಡಾ. ಟಿ. ಜಯಪ್ರಕಾಶ್ ರಾವ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ ಅವರು ನೂತನ ಆಡಿಟೋರಿಯಂ ಉದ್ಘಾಟಿಸಲಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಎಂ. ಜಯಕರ್ ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ನೂತನ ಆಡಿಟೋರಿಯಂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಗಣ್ಯರಿಗಾಗಿ ಪ್ರತ್ಯೇಕ ವಿಐಪಿ ಲಾಂಜ್, ಭೋಜನಾಲಯ ಹಾಗೂ 2 ಸಾವಿರಕ್ಕೂ ಅಧಿಕ ಮಂದಿ ಆಸನ ವ್ಯವಸ್ಥೆ ಹೊಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಕಾರ್ಯಾಗಾರ ಹಾಗೂ ವಿವಿಧ ಸಮಾರಂಭಗಳಿಗೆ ಸಭಾಂಗಣವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ವಿವಿಧ ವಿಭಾಗಗಳಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಅವರ ಮುಂದಿನ ವೃತ್ತಿಜೀವನ ಹಾಗೂ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಲಾಗುವುದು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಟಿ., ಉಪ ಪ್ರಾಂಶುಪಾಲ ಡಾ. ಆಂಟೋನಿ ಪಿ.ಜೆ. ಹಾಗೂ ಸಂಸ್ಥೆಯ ಪ್ರಮುಖರಾದ ಡಾ. ರಾಜೇಶ್ ರೈ ಪಿ. ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!