ಹಂಪನಕಟ್ಟೆಯಲ್ಲೇ ತುಳು ಎಂ.ಎ. ಅಧ್ಯಯನ ಕೇಂದ್ರ ಮುಂದುವರಿಸಿ

ಮಂಗಳೂರು: ನಗರದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲೇ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ಮುಂದುವರಿಸಬೇಕು ಹಾಗೂ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತುಳುವನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ‘ಪರಪು’ ತುಳು ಎಂ.ಎ. ಹಿರಿಯ ವಿದ್ಯಾರ್ಥಿಗಳ ಸಂಘ ಆಗ್ರಹಿಸಿದೆ.

ಮಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ಉತ್ತಮ ಪಠ್ಯಕ್ರಮ ರೂಪಿಸಿ, ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸುವ ಮೂಲಕ ತುಳು ಭಾಷಾ ಅಧ್ಯಯನಕ್ಕೆ ಸೂಕ್ತ ಶೈಕ್ಷಣಿಕ ಸ್ವರೂಪ ನೀಡಿತ್ತು. ಏಳು ಬ್ಯಾಚ್‌ಗಳಲ್ಲಿ ಸುಮಾರು 150 ಮಂದಿ ತುಳು ಎಂ.ಎ. ಅಧ್ಯಯನ ಮಾಡಿದ್ದಾರೆ. ಆದರೆ, ಕೋರ್ಸ್‌ನ್ನು ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಿಂದ ಕೊಣಾಜೆಯ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಸ್ಥಳಾಂತರಿಸಿದ ಬಳಿಕ ಪ್ರವೇಶಾತಿ ಶೂನ್ಯವಾಗಿದೆ. ಹೀಗಾಗಿ ತುಳು ಭಾಷೆಯ ಬೆಳವಣಿಗೆ ಹಾಗೂ ಆಸಕ್ತರಿಗೆ ಅಧ್ಯಯನದ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಹಂಪನಕಟ್ಟೆಯಲ್ಲಿರುವ ತುಳು ಎಂ.ಎ. ಅಧ್ಯಯನ ಕೇಂದ್ರವನ್ನು ತಕ್ಷಣ ಪುನರಾರಂಭಿಸಿ, ಶಾಶ್ವತವಾಗಿ ಮುಂದುವರಿಸಬೇಕು ಎಂದು ‘ಪರಪು’ ಅಧ್ಯಕ್ಷ ಸುಭಾಷ್‌ಚಂದ್ರ ಕಣ್ವತೀರ್ಥ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತುಳು ಎಂ.ಎ. ಕೋರ್ಸ್‌ನ್ನು ಕೊಣಾಜೆಗೆ ಸ್ಥಳಾಂತರಿಸಿದ ಪರಿಣಾಮ ಉಡುಪಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ದೂರದ ಪ್ರದೇಶಗಳ ಆಸಕ್ತರು ಕೊಣಾಜೆಗೆ ತೆರಳಲು ಹಿಂದೇಟು ಹಾಕಿದರು. ಇದರಿಂದಾಗಿ ಕೋರ್ಸ್‌ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಳು ಎಂ.ಎ. ಅಧ್ಯಯನಕ್ಕೆ ಮುಂದಾಗುವವರು ತುಳು ಭಾಷೆಯನ್ನು ಬೆಳೆಸಿ ಉಳಿಸುವ ಉದ್ದೇಶ ಹೊಂದಿರುತ್ತಾರೆ ಹೊರತು, ಭವಿಷ್ಯದಲ್ಲಿ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದಲ್ಲ. ಈ ವಾಸ್ತವವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳು ಪರಿಗಣಿಸಬೇಕಿತ್ತು ಎಂದು ಅವರು ಹೇಳಿದರು.

ಹಂಪನಕಟ್ಟೆಯ ತುಳು ಎಂ.ಎ. ಕೇಂದ್ರದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಮನಗಂಡ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉತ್ತಮ ಗ್ರಂಥಾಲಯ ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಿದ್ದರು. ಆದರೆ, ಕೋರ್ಸ್‌ ಸ್ಥಳಾಂತರಗೊಂಡ ಬಳಿಕ ಈ ಸೌಲಭ್ಯಗಳು ಬಳಕೆಯಾಗದೆ ಅನಾಥವಾಗಿವೆ. ಮಂಗಳೂರು ವಿಶ್ವವಿದ್ಯಾಲಯದ ತಪ್ಪು ನಿರ್ಣಯಗಳೇ ತುಳು ಅಧ್ಯಯನ ಕೇಂದ್ರದ ಇಂದಿನ ಅತಂತ್ರ ಸ್ಥಿತಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ತುಳು ಭಾಷೆಗೆ ಶೈಕ್ಷಣಿಕ ಮಾನ್ಯತೆ ನೀಡುವಲ್ಲಿ ಮಂಗಳೂರು ವಿಶ್ವವಿದ್ಯಾಲಯವೇ ಸಮರ್ಪಕ ಕ್ರಮ ಕೈಗೊಳ್ಳದಿದ್ದರೆ, ಬೇರೆ ವಿಶ್ವವಿದ್ಯಾಲಯಗಳಿಂದ ನಿರೀಕ್ಷಿಸುವುದು ಹೇಗೆ ಸಾಧ್ಯ? ಉನ್ನತ ಶಿಕ್ಷಣ ಹಂತದಲ್ಲಿ ತುಳು ಅಧ್ಯಯನಕ್ಕೆ ಬಲ ದೊರೆತರೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿಯೂ ತುಳು ಭಾಷಾ ಅಧ್ಯಯನಕ್ಕೆ ಉತ್ತೇಜನ ದೊರೆಯಲಿದೆ ಎಂದು ಸುಭಾಷ್‌ಚಂದ್ರ ಕಣ್ವತೀರ್ಥ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ‘ಪರಪು’ ಉಪಾಧ್ಯಕ್ಷ ಹರೀಶ ಎ., ಸದಸ್ಯರಾದ ಗೀತಾ ಜೈನ್‌, ಭಾಗ್ಯಶ್ರೀ ಶೆಟ್ಟಿ, ಶಿವರಾಮ ಶೆಟ್ಟಿ, ಚಂದ್ರಹಾಸ ಕಣಂತೂರು ಹಾಗೂ ಜ್ಞಾನೇಶ್ವರಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!