ಮಂಗಳೂರು:* ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಸರ್ಕಾರದ ಪ್ರಸ್ತಾವನೆಯು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಹಿನ್ನಡೆಯಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಆರೋಪಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಆರಂಭದಲ್ಲಿ ಉಚಿತ ಹಾಗೂ ಸರಳ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸಿ ಜನರನ್ನು ಡಿಜಿಟಲ್ ವಹಿವಾಟಿನತ್ತ ಕೊಂಡೊಯ್ದ ಬಳಿಕ, ಇದೀಗ ಶುಲ್ಕ ವಿಧಿಸುವ ಕ್ರಮಕ್ಕೆ ಮುಂದಾಗಿರುವುದು ಸರ್ಕಾರದ ನೀತಿಯಲ್ಲಿನ ಹಿಮ್ಮುಖ ಚಲನೆಯ ಸಂಕೇತವಾಗಿದೆ ಎಂದು ಟೀಕಿಸಿದ್ದಾರೆ.
ಯುಪಿಐ ವಹಿವಾಟಿನ ಶುಲ್ಕವನ್ನು ಗ್ರಾಹಕರ ಬದಲಿಗೆ ವ್ಯಾಪಾರಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ರೂಪದಲ್ಲಿ ವಿಧಿಸಲಾಗುತ್ತದೆ ಎಂಬ ವಾದವು ವಾಸ್ತವದಲ್ಲಿ ಜನಸಾಮಾನ್ಯರ ಮೇಲೆಯೇ ಪರೋಕ್ಷ ಹೊರೆ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ವ್ಯಾಪಾರಿಗಳು ಹೆಚ್ಚುವರಿ ವೆಚ್ಚವನ್ನು ದಿನಸಿ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಪ್ರತಿಬಿಂಬಿಸುವ ಸಾಧ್ಯತೆ ಇರುವುದರಿಂದ ಅಂತಿಮವಾಗಿ ಅದರ ಪರಿಣಾಮ ಗ್ರಾಹಕರ ಮೇಲೂ ಬೀಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

₹1 ಲಕ್ಷದವರೆಗಿನ ವಹಿವಾಟಿಗೆ ಸಂಬಂಧಿಸಿದ ವಿನಾಯಿತಿ ಹಾಗೂ ಜಿಎಸ್‌ಟಿ ಲೆಕ್ಕಾಚಾರಗಳಂತಹ ನಿಯಮಗಳು ಸಣ್ಣ ವ್ಯಾಪಾರಿಗಳಲ್ಲಿ ಗೊಂದಲ ಮತ್ತು ಅನಿಶ್ಚಿತತೆ ಸೃಷ್ಟಿಸುವ ಸಾಧ್ಯತೆಯಿದೆ. ಇದರಿಂದ ಕೆಲವರು ಡಿಜಿಟಲ್ ಪಾವತಿಯನ್ನು ನಿರುತ್ಸಾಹಗೊಳಿಸಿ ಮತ್ತೆ ನಗದು ವಹಿವಾಟಿಗೆ ಆದ್ಯತೆ ನೀಡುವ ಪರಿಸ್ಥಿತಿ ಉಂಟಾಗಬಹುದು ಎಂದು ಪೂಜಾರಿ ಎಚ್ಚರಿಸಿದ್ದಾರೆ.
ಡಿಜಿಟಲ್ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕ ಅಥವಾ ತೆರಿಗೆ ವಿಧಿಸುವುದರಿಂದ ದೊಡ್ಡ ಮೊತ್ತದ ವಹಿವಾಟುಗಳಲ್ಲಿ ಜನರು ಮತ್ತೆ ನಗದು ಬಳಸುವ ಪ್ರವೃತ್ತಿ ಹೆಚ್ಚಾದರೆ, ಆರ್ಥಿಕ ವ್ಯವಹಾರಗಳ ಪಾರದರ್ಶಕತೆಗೂ ಧಕ್ಕೆಯಾಗಬಹುದು. ಇದರಿಂದ ನಗದು ಆಧಾರಿತ ಆರ್ಥಿಕ ಚಟುವಟಿಕೆಗಳು ಹಾಗೂ ಕಪ್ಪುಹಣದ ಚಲಾವಣೆಗೆ ಅವಕಾಶ ಹೆಚ್ಚಾಗುವ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.
ನಗದು ರಹಿತ ಹಾಗೂ ಪಾರದರ್ಶಕ ಆರ್ಥಿಕ ವ್ಯವಸ್ಥೆಯನ್ನು ಉತ್ತೇಜಿಸುವ ಬದಲು ಡಿಜಿಟಲ್ ಪಾವತಿಯನ್ನು ಹೆಚ್ಚುವರಿ ವೆಚ್ಚದ ವ್ಯವಸ್ಥೆಯನ್ನಾಗಿ ಮಾಡುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಪದ್ಮರಾಜ್ ಆರ್. ಪೂಜಾರಿ ಆಗ್ರಹಿಸಿದ್ದಾರೆ.


