ಗಡಿನಾಡಿನ ಕನ್ನಡಾಭಿಮಾನಕ್ಕೆ ಮಾದರಿ: ಡಾ. ವಾಮನ್‌ರಾವ್ ಬೇಕಲ್

ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನೆಲ-ಜಲದ ಸಂರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವಾಮನ್‌ರಾವ್ ಬೇಕಲ್ ಅವರು ಕನ್ನಡಾಭಿಮಾನಕ್ಕೆ ಮಾದರಿಯಾಗಿದ್ದಾರೆ. ಕನ್ನಡ ಶಾಲೆಗಳ ಉಳಿವು, ಕನ್ನಡ ಸಾಹಿತ್ಯದ ಬೆಳವಣಿಗೆ ಹಾಗೂ ಕನ್ನಡ ಸಂಸ್ಕೃತಿಯ ಸಂವರ್ಧನೆಗಾಗಿ ಅವರು ಕೈಗೊಂಡಿರುವ ಕಾರ್ಯಗಳು ಗಡಿನಾಡಿನ ಕನ್ನಡಿಗರ ಗಮನ ಸೆಳೆಯುತ್ತಿವೆ.

ಇತ್ತೀಚೆಗೆ ನಡೆದ ‘ಕನ್ನಡ ಶಾಲೆ ಉಳಿಸಿ-ಬೆಳೆಸಿ ಅಭಿಯಾನ’ದ ಕನ್ನಡ ಯಾತ್ರೆಯ ಸಂದರ್ಭದಲ್ಲಿ ಡಾ. ವಾಮನ್‌ರಾವ್ ಬೇಕಲ್ ಅವರ ವಿಶಿಷ್ಟ ಕನ್ನಡ ಸೇವೆ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಸ್ವಂತ ಮನೆಯನ್ನು ಕನ್ನಡ ಭವನವನ್ನಾಗಿಸಿದ ಸಾಧಕ….!

ಕಾಸರಗೋಡು ನಗರದ ತಮ್ಮ ಸ್ವಂತ ಮನೆಯನ್ನು ‘ಕನ್ನಡ ಭವನ’ವನ್ನಾಗಿ ರೂಪಿಸಿರುವ ಡಾ. ವಾಮನ್‌ರಾವ್ ಬೇಕಲ್ ಅವರು, ಅಲ್ಲಿ ಅಪರೂಪದ ಪುಸ್ತಕಗಳನ್ನು ಒಳಗೊಂಡ ವಿಶಾಲ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಅಮೂಲ್ಯ ಕೃತಿಗಳೊಂದಿಗೆ ಹಳೆಯ ಕಾಲದ ನಾಣ್ಯಗಳು ಮತ್ತು ನೋಟುಗಳ ಅಪೂರ್ವ ಸಂಗ್ರಹವನ್ನೂ ಸಂರಕ್ಷಿಸಿಕೊಂಡಿದ್ದಾರೆ.

ಕನ್ನಡದ ಕೆಲಸಕ್ಕಾಗಿ ಕಾಸರಗೋಡಿಗೆ ಆಗಮಿಸುವ ಸಾಹಿತಿಗಳು, ಕಲಾವಿದರು, ಕನ್ನಡಪರ ಹೋರಾಟಗಾರರು ಹಾಗೂ ಆಸಕ್ತರಿಗೆ ತಮ್ಮ ಮನೆಯ ಮೇಲಿನ ಎರಡು ಮಹಡಿಗಳಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಅವರು ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕನ್ನಡ ಕಾರ್ಯ ಹಾಗೂ ಯಾತ್ರೆಗಾಗಿ ಆಗಮಿಸುವವರಿಗೆ ಎರಡು ದಿನಗಳವರೆಗೆ ವಸತಿ ವ್ಯವಸ್ಥೆ ಕಲ್ಪಿಸುತ್ತಿರುವುದು ಅವರ ಕನ್ನಡಪರ ಕಾಳಜಿಗೆ ಸಾಕ್ಷಿಯಾಗಿದೆ.

ಶಾಲೆಗಳತ್ತ ಕನ್ನಡದ ನಡಿಗೆ….!

ಡಾ. ವಾಮನ್‌ರಾವ್ ಬೇಕಲ್ ಅವರ ನೇತೃತ್ವದಲ್ಲಿ ಸ್ಥಾಪಿತವಾದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೂಡ ಕನ್ನಡ ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಪ್ರಸಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

2025–26ನೇ ಸಾಲಿನಲ್ಲಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 20 ಶಾಲೆಗಳಲ್ಲಿ 3,500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪುವ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ‘ಕನ್ನಡದ ನಡಿಗೆ–ಶಾಲೆಯ ಕಡೆಗೆ’ ಎಂಬ ಆಶಯದೊಂದಿಗೆ ನಡೆದ ಈ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

ಸಾಹಿತಿಗಳು, ಕಲಾವಿದರು, ಪತ್ರಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ…..!

ಈ ಕನ್ನಡಪರ ಅಭಿಯಾನದಲ್ಲಿ ಸಮಭಾವದೊಂದಿಗೆ ಸಾಹಿತಿಗಳು, ಕಲಾವಿದರು, ಶಿಕ್ಷಕರು ಹಾಗೂ ಪತ್ರಕರ್ತರು ಶಾಲೆಗಳತ್ತ ಮುಖ ಮಾಡಿದ್ದಾರೆ.

ಖ್ಯಾತ ಸಾಹಿತಿಗಳಾದ ವಿ. ಬಿ. ಕುಳಮರ್ವ, ವಿರಾಜ್ ಅಡೂರ್, ಡಾ. ಕೊಲಚಪ್ಪೆ ಗೋವಿಂದ ಭಟ್, ರೇಖಾ ಸುದೇಶ್ ರಾವ್, ಉಮೇಶ್ ರಾವ್ ಕುಂಬ್ಳೆ, ಡಾ. ಸುರೇಶ್ ನೆಗಳಗುಳಿ, ವಸಂತ್ ಕೆರೆಮನೆ, ಚಿತ್ರಕಲಾವಿದೆ ಅನ್ನೆಪಲ್ಲಡ್ಕ, ದೇವರಾಜ್ ಆಚಾರ್ಯ, ಚಿತ್ರಕಲಾ ಶಿಕ್ಷಕಿ ದೇವರಾಜ್ ಟೀಚರ್, ಶಶಿಕಲಾ ಟೀಚರ್ ಕುಂಬ್ಳೆ, ಸಂಧ್ಯಾರಾಣಿ ಟೀಚರ್, ಪತ್ರಕರ್ತ ಹಾಗೂ ಲೇಖಕ ಗಿರೀಶ್ ಪಿ. ಎಂ. ಸೇರಿದಂತೆ ಹಲವು ಮಂದಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಕನ್ನಡದ ಒಡನಾಟ ಬೆಳೆಸಿದ್ದಾರೆ.

ಶಾಲಾ ವ್ಯವಸ್ಥಾಪಕರು ಹಾಗೂ ಅಧ್ಯಾಪಕರು ತುಂಬು ಮನಸ್ಸಿನಿಂದ ಸಹಕರಿಸಿರುವುದು ಈ ಅಭಿಯಾನದ ಯಶಸ್ಸಿಗೆ ಮತ್ತಷ್ಟು ಬಲ ನೀಡಿದೆ.

ಕನ್ನಡದ ಅಸ್ಮಿತೆ ಉಳಿಸುವ ನಿರಂತರ ಪ್ರಯತ್ನ….!

ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಡಾ. ವಾಮನ್‌ರಾವ್ ಬೇಕಲ್ ಅವರ ಸೇವೆ ಗಮನಾರ್ಹವಾಗಿದೆ. ಕನ್ನಡವು ಕೇವಲ ಸಂವಹನದ ಭಾಷೆಯಲ್ಲ, ಅದು ಬದುಕಿನ ಒಂದು ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ತಮ್ಮ ಕಾರ್ಯಗಳ ಮೂಲಕ ಅವರು ಸಾರುತ್ತಿದ್ದಾರೆ.

ಕನ್ನಡ ಭವನ ನಿರ್ಮಾಣದಿಂದ ಹಿಡಿದು ಶಾಲೆಗಳತ್ತ ಕನ್ನಡದ ನಡಿಗೆ, ಗ್ರಂಥಾಲಯ ಸ್ಥಾಪನೆ, ಕನ್ನಡಪರ ಕಾರ್ಯಕ್ರಮಗಳ ಆಯೋಜನೆ ಹಾಗೂ ಕನ್ನಡ ಕಾರ್ಯಕರ್ತರಿಗೆ ವಸತಿ ಸೌಲಭ್ಯ ಕಲ್ಪಿಸುವವರೆಗೆ ಅವರ ಸೇವೆಯ ವ್ಯಾಪ್ತಿ ವಿಸ್ತರಿಸಿದೆ.

ಗಡಿನಾಡಿನ ಕನ್ನಡ ಶಾಲೆಗಳ ಉಳಿವಿಗಾಗಿ ನಡೆಯುತ್ತಿರುವ ಈ ಅಭಿಯಾನಕ್ಕೆ ಕನ್ನಡಾಭಿಮಾನಿಗಳ ಬೆಂಬಲ ಹಾಗೂ ಸಹಕಾರ ಇನ್ನಷ್ಟು ದೊರೆಯಬೇಕಿದೆ. ಡಾ. ವಾಮನ್‌ರಾವ್ ಬೇಕಲ್ ಅವರ ಕನ್ನಡಪರ ಚಟುವಟಿಕೆಗಳು ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸಲಿ ಎಂಬುದು ಕನ್ನಡ ಮನಸುಗಳ ಆಶಯವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!