ಶಾಹೀನ್ ಸಂಸ್ಥೆಯ ವಿದ್ಯಾರ್ಥಿನಿ ಕೋಮಾ ಸ್ಥಿತಿಯಲ್ಲಿ: ಪೋಷಕರಿಂದ ನಿರ್ಲಕ್ಷ್ಯದ ಆರೋಪ

ಮಂಗಳೂರು: ಬೀದರ್‌ನ ಶಾಹೀನ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಂಗಳೂರಿನ ವಿದ್ಯಾರ್ಥಿನಿ ಯುಮ್ನಾ ಅಸ್ವಸ್ಥಗೊಂಡು ಇದೀಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಅವರ ಪೋಷಕರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಗಂಭೀರ ಆರೋಗ್ಯ ಸ್ಥಿತಿಗೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪೋಷಕರು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯ ತಂದೆ ಅಶ್ವಾಕ್ ಶೇಕ್, ಹಾಸ್ಟೆಲ್‌ನಲ್ಲಿದ್ದ ವೇಳೆ ತಮ್ಮ ಪುತ್ರಿ ತೀವ್ರ ಅನಾರೋಗ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲಿದ್ದರು. ಈ ವೇಳೆ ಹಾಸ್ಟೆಲ್‌ನ ನರ್ಸಿಂಗ್ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟರೂ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸದೆ ಅಥವಾ ಆಸ್ಪತ್ರೆಗೆ ದಾಖಲಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ಮಗಳು ಅನಾರೋಗ್ಯಕ್ಕೆ ಒಳಗಾಗಿರುವ ಮಾಹಿತಿ ತಿಳಿದು ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಟೈಫಾಯ್ಡ್ ಜ್ವರ ಇರುವುದು ಪತ್ತೆಯಾಗಿತ್ತು. ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ದೊರೆಯದ ಪರಿಣಾಮ ಕಿಡ್ನಿ ಹಾಗೂ ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅಶ್ವಾಕ್ ಶೇಕ್ ಹೇಳಿದರು.

ಮಗಳ ಚಿಕಿತ್ಸೆಗೆ ಈಗಾಗಲೇ ಸುಮಾರು 35 ಲಕ್ಷ ರೂ. ವೆಚ್ಚವಾಗಿದೆ. ಆದರೆ ವಿದ್ಯಾರ್ಥಿನಿಯನ್ನು ಬೀದರ್‌ನಿಂದ ಕರೆತಂದ ಬಳಿಕ ಸಂಸ್ಥೆಯವರು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅವರು ಆರೋಪಿಸಿದರು. ಹಾಸ್ಟೆಲ್‌ನಲ್ಲಿ ಅನಾರೋಗ್ಯಕ್ಕೆ ಒಳಗಾದ ಬಳಿಕ ನೀಡಲಾದ ಚಿಕಿತ್ಸೆಯ ಸಂಪೂರ್ಣ ವಿವರಗಳು, ವೈದ್ಯಕೀಯ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

“ತನಿಖೆಯ ವರದಿ ಹಾಗೂ ಅನ್ವಯಿಸುವ ಕಾನೂನುಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ನಲ್ಲಿ ಈಗಾಗಲೇ ಹಲವು ಮಕ್ಕಳು ಜಾಂಡೀಸ್, ಟೈಫಾಯ್ಡ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಲ್ಲಿರುವ ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಬೇಕು” ಎಂದು ಅಶ್ವಾಕ್ ಶೇಕ್ ಆಗ್ರಹಿಸಿದರು.

ಇದೇ ವೇಳೆ ದಾವಣಗೆರೆ ಮೂಲದ ವಿದ್ಯಾರ್ಥಿನಿಯೊಬ್ಬರ ತಂದೆ ಅನ್ಸಾರ್ ಅಲಿ ಮಾತನಾಡಿ, ಶಾಹೀನ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಪುತ್ರಿಯೂ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ದಿನದಿಂದ ಆಕೆ ಕಣ್ಣು ತೆರೆದಿದ್ದಾಳೆ ಎಂದು ತಿಳಿಸಿದರು.

ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಮಗಳನ್ನು ಸಂಸ್ಥೆಗೆ ಸೇರಿಸಲಾಗಿತ್ತು. ಆದರೆ ಇದೀಗ ಹಲವು ವಿದ್ಯಾರ್ಥಿಗಳು ಒಂದೇ ರೀತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿಯ ಕುಟುಂಬಸ್ಥರಾದ ಸೈಯದ್ ಶಾರೀಕ್ ಹಾಗೂ ಶೌಕತ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!