ಟೆಕ್ಸಾಸ್‌ನ 90 ಅಡಿ ಹನುಮಂತ ವಿಗ್ರಹ ತೆರವಿಗೆ ಕರೆ: ವಿವಾದ

ಟೆಕ್ಸಾಸ್ :
ಅಮೆರಿಕದ ಟೆಕ್ಸಾಸ್‌ನಲ್ಲಿ 90 ಅಡಿ ಎತ್ತರದ ಭಗವಾನ್ ಹನುಮಂತನ ವಿಗ್ರಹವನ್ನು ತೆರವುಗೊಳಿಸುವುದಾಗಿ ಯೂಟ್ಯೂಬರ್ ಜೆಸ್ಸಿ ಹ್ಯೂಸ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

ಮುಂಬರುವ ಅಮೆರಿಕದ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಹಿಂದೂ-ಅಮೆರಿಕನ್ ಸಮುದಾಯ ಸೇರಿದಂತೆ ವಿವಿಧ ವಲಯಗಳಿಂದ ಆಕ್ಷೇಪ ವ್ಯಕ್ತವಾಗಿದೆ.

ಹೂಸ್ಟನ್ ಸಮೀಪದ ಶುಗರ್‌ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಾಲಯದ ಆವರಣದಲ್ಲಿ ‘ಸ್ಟ್ಯಾಚು ಆಫ್ ಯೂನಿಯನ್’ ಎಂದು ಕರೆಯಲಾಗುವ 90 ಅಡಿ ಎತ್ತರದ ಪಂಚಲೋಹದ ಹನುಮಂತನ ವಿಗ್ರಹವನ್ನು 2024ರ ಆಗಸ್ಟ್‌ನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಈ ವಿಗ್ರಹವನ್ನು ಭಕ್ತಿ, ಶಕ್ತಿ ಮತ್ತು ನಿಸ್ವಾರ್ಥ ಸೇವೆಯ ಪ್ರತೀಕವಾಗಿ ಸ್ಥಾಪಿಸಲಾಗಿದ್ದು, 2024ರ ಆಗಸ್ಟ್ 18ರಂದು ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು.

ಇತ್ತೀಚೆಗೆ ಸಂಪ್ರದಾಯವಾದಿ ಯೂಟ್ಯೂಬರ್ ಹಾಗೂ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಚಳವಳಿಯೊಂದಿಗೆ ಗುರುತಿಸಿಕೊಂಡಿರುವ ಜೆಸ್ಸಿ ಹ್ಯೂಸ್, ಹನುಮಂತನ ವಿಗ್ರಹದ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, “Btw, when we win, we are tearing this down” ಎಂದು ಬರೆದುಕೊಂಡಿದ್ದಾರೆ. ಆದರೆ ಅವರು ‘ನಾವು ಗೆದ್ದಾಗ’ ಎಂಬ ಹೇಳಿಕೆಯಲ್ಲಿ ಯಾವ ಚುನಾವಣಾ ಅಥವಾ ರಾಜಕೀಯ ಗೆಲುವನ್ನು ಉಲ್ಲೇಖಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ವರದಿಗಳು ತಿಳಿಸಿವೆ.

ಹ್ಯೂಸ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸೇನೆಯ ಮಾಜಿ ಯೋಧ ಹಾಗೂ ಹಿಂದೂ-ಅಮೆರಿಕನ್ ರುಚಿರ್ ಬಕ್ಷಿ “ನನ್ನ ಧರ್ಮವನ್ನು ಗುರಿಯಾಗಿಸುವ ದೇಶಕ್ಕಾಗಿ ನಾನು ಯುದ್ಧಕ್ಕೆ ಹೋಗಿರಲಿಲ್ಲ” ಎಂದಿದ್ದಾರೆ.

ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ಸೇನಾ ಸೇವೆ ಸಲ್ಲಿಸಿರುವ ಬಕ್ಷಿ, ದೇವಾಲಯವನ್ನು ಧ್ವಂಸಗೊಳಿಸುವ ಕರೆ ದೇಶಭಕ್ತಿಯಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (CoHNA) ಸೇರಿದಂತೆ ಕೆಲ ಹಿಂದೂ ಸಂಘಟನೆಗಳೂ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ದ್ವೇಷದ ಹೇಳಿಕೆಗಳು ಹರಡುವ ಕುರಿತು ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವೇಳೆ, 2024ರಲ್ಲಿ ಹನುಮಂತನ ವಿಗ್ರಹ ಪ್ರತಿಷ್ಠಾಪನೆಯ ಸಂದರ್ಭದಲ್ಲೂ ಕೆಲವು ಸ್ಥಳೀಯ ಧಾರ್ಮಿಕ ಗುಂಪುಗಳು ವಿರೋಧ ವ್ಯಕ್ತಪಡಿಸಿದ್ದವು ಎಂದು ಹೂಸ್ಟನ್ ಕ್ರಾನಿಕಲ್ ವರದಿ ಮಾಡಿತ್ತು.

SHARE
Loading spinner

Leave a Reply

Your email address will not be published. Required fields are marked *

error: Content is protected !!