ಮಂಗಳೂರು: ಉದ್ಯಮಗಳ ಬೆಳವಣಿಗೆಗೆ ಸರ್ಕಾರದ ನೀತಿಗಳ ಜತೆಗೆ ಖಾಸಗಿ ವಲಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಮಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಉದ್ಯಮಗಳಿಗೆ ಪೂರಕವಾದ ಪರಿಸರ ವ್ಯವಸ್ಥೆ ನಿಧಾನವಾಗಿ ರೂಪುಗೊಳ್ಳುತ್ತಿದ್ದು, ಇದನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹೇಳಿದರು.

ನಗರದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ‘ಮಂಗಳೂರು ಟೆಕ್ನೋವಾಂಜಾ-2026’ರ ಆರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಉದ್ಯಮಗಳಿಗೆ ಅಗತ್ಯವಾದ ವಿವಿಧ ಸೌಲಭ್ಯಗಳು ಹಾಗೂ ಸಂಪನ್ಮೂಲಗಳು ಒಂದೇ ಕಡೆ ಲಭ್ಯವಿರುವುದರಿಂದ ಬಲಿಷ್ಠ ಉದ್ಯಮ ಪರಿಸರ ವ್ಯವಸ್ಥೆ ರೂಪುಗೊಂಡಿದೆ. ಇದೇ ಮಾದರಿಯಲ್ಲಿ ಮಂಗಳೂರಿನಲ್ಲಿಯೂ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು, ಪ್ರತಿಭಾವಂತ ಮಾನವ ಸಂಪನ್ಮೂಲ, ಉದ್ಯಮಶೀಲತೆಯ ಮನೋಭಾವ ಹಾಗೂ ಮೂಲಸೌಕರ್ಯಗಳು ಮಂಗಳೂರಿನ ಪ್ರಮುಖ ಶಕ್ತಿಗಳಾಗಿವೆ. ನಗರದ ಅಭಿವೃದ್ಧಿಯನ್ನು ಕೇವಲ ಐಟಿ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ, ಕ್ರೀಡಾ ಪ್ರವಾಸೋದ್ಯಮ, ಸಾಗರ ಅಧ್ಯಯನ ಹಾಗೂ ಜೈವಿಕ ಸಂಪನ್ಮೂಲ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀನುಗಾರಿಕಾ ಕಾಲೇಜನ್ನು ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯವಾಗಿ ಪರಿವರ್ತಿಸುವ ನಿರ್ಧಾರ ಕೈಗೊಂಡಿರುವುದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಶಿಕ್ಷಣ ಸಂಸ್ಥೆಗಳು ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಸಂಶೋಧನೆ ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸುವ ಸಾಮರ್ಥ್ಯ ಹೊಂದಿವೆ. ಈ ನಿಟ್ಟಿನಲ್ಲಿ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಬೇಕಾಗಿದೆ ಎಂದು ಅತೀಕ್ ತಿಳಿಸಿದರು.
ಮಂಗಳೂರಿನಲ್ಲಿ ಉದ್ಯಮಗಳಿಗೆ ಪೂರಕವಾದ ಪರಿಸರ ವ್ಯವಸ್ಥೆ ಮತ್ತಷ್ಟು ಬಲಗೊಂಡರೆ, ಇಲ್ಲಿನ ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವ ಬದಲು ಸ್ಥಳೀಯವಾಗಿಯೇ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗಲಿದೆ. ಸರ್ಕಾರದ ನೀತಿಗಳು, ಖಾಸಗಿ ಹೂಡಿಕೆ, ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಗಳ ಸಹಭಾಗಿತ್ವದ ಮೂಲಕ ಮಂಗಳೂರನ್ನು ಐಟಿ ಕ್ಷೇತ್ರದ ಜತೆಗೆ ವಿವಿಧ ವಲಯಗಳ ಸಮಗ್ರ ಹಾಗೂ ಸುಸ್ಥಿರ ಬೆಳವಣಿಗೆಯ ಕೇಂದ್ರವನ್ನಾಗಿ ರೂಪಿಸಬಹುದು ಎಂದರು.

ಕೃತಕ ಬುದ್ಧಿಮತ್ತೆ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಗಳು ನಡೆಯುತ್ತಿವೆ. ಹೀಗಾಗಿ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಕ್ಷೇತ್ರಗಳು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ಎಲ್.ಕೆ. ಅತೀಕ್ ಹೇಳಿದರು.
ಕಾರ್ಯಕ್ರಮದಲ್ಲಿ ಕೆಡಿಇಎಂ ಅಧ್ಯಕ್ಷ ಬಿ.ವಿ. ನಾಯ್ಡು, ಮಂಗಳೂರು ಕ್ಲಸ್ಟರ್‌ನ ಪ್ರಮುಖ ಉದ್ಯಮ ಪ್ರತಿನಿಧಿ ಹಾಗೂ ಲೀಡ್ ಇಂಡಸ್ಟ್ರಿ ಆಂಕರ್ ರೋಹಿತ್ ಭಟ್ ಮತ್ತು ಕೆಡಿಇಎಂ ಸಿಇಒ ಸಂಜೀವ್ ಕುಮಾರ್ ಗುಪ್ತಾ ಸೇರಿದಂತೆ ಉದ್ಯಮ, ಶಿಕ್ಷಣ ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

