ಯುಎಇಯಲ್ಲಿ ಸಂಭ್ರಮದಿಂದ ನೆರವೇರಿದ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ 12ನೇ ವರ್ಷದ ಗಣೇಶೋತ್ಸವ

ಅಜ್ಮಾನ್.: ಯುಎಇಯಲ್ಲಿ ಕನ್ನಡದ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ವತಿಯಿಂದ ಆಯೋಜಿಸಿದ್ದ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಅಜ್ಮಾನ್‌ನ ಜುರ್ಫ್‌ನಲ್ಲಿರುವ ಇಂಡಿಯನ್ ಅಸೋಸಿಯೇಷನ್ ಹಾಲ್‌ನಲ್ಲಿ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಅದ್ದೂರಿಯಾಗಿ ನೆರವೇರಿತು.

ಗಣಹೋಮ, ಶ್ರೀಗಣೇಶನ ಮೂರ್ತಿ ಪ್ರತಿಷ್ಠಾಪನೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ವೇದಮೂರ್ತಿಗಳಾದ ಸಾಂತೂರು ಲಕ್ಷ್ಮೀಕಾಂತ್ ಭಟ್ ಹಾಗೂ ರಾಜೇಶ್ ಪ್ರಸಾದ್ ಅಡಿಗ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಉದ್ಯಮಿ ಕೃಷ್ಣ ಜೆ. ಪಾಲೇಮಾರ್, ಕರ್ನಾಟಕ ಸಂಘ ಅಬುಧಾಬಿಯ ಅಧ್ಯಕ್ಷ *ಸರ್ವೋತ್ತಮ ಶೆಟ್ಟಿ, ಸಮಾಜಸೇವಕ *ರವಿ ಕಟಪಾಡಿ, ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇ ಅಧ್ಯಕ್ಷ ಮಹೇಶ್ ಚಂದ್ರಗಿರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಮಾರ್ಗದೀಪ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಸಂಚಾಲಕರಾದ ಸುಗಂಧರಾಜ್ ಬೇಕಲ್ ಹಾಗೂ ಅಜೀತ್ ಕೊರಕೊಡು, ಉಪಾಧ್ಯಕ್ಷ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ಕೋಶಾಧಿಕಾರಿ ರಾಜೇಶ್ ರಾವ್ ಸೇರಿದಂತೆ ಸಮಿತಿಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ಸ್ಮರಿಸಲಾಯಿತು.

ರವಿ ಕಟಪಾಡಿ ಅವರಿಗೆ ವಿಶೇಷ ಗೌರವ

ಗಣೇಶೋತ್ಸವದ ಪ್ರಮುಖ ವಿಶೇಷತೆಗಳಲ್ಲಿ ಸಮಾಜಸೇವಕ ರವಿ ಕಟಪಾಡಿ ಅವರಿಗೆ ನೀಡಲಾದ ವಿಶೇಷ ಸನ್ಮಾನವೂ ಒಂದಾಗಿತ್ತು. ಕಾಪು ತಾಲೂಕಿನ ಕಟಪಾಡಿಯವರಾದ ರವಿ ಕಟಪಾಡಿ ಕಟ್ಟಡ ಸೆಂಟ್ರಿಂಗ್ ಕಾರ್ಮಿಕರಾಗಿ ದುಡಿಯುತ್ತಲೇ ಕಳೆದ 14 ವರ್ಷಗಳಿಂದ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ವೇಷಧಾರಣೆಗಳ ಮೂಲಕ ಹಣ ಸಂಗ್ರಹಿಸಿ ಬಡ ಹಾಗೂ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ಅವರ ತಂಡ ₹1.85 ಕೋಟಿ ಸಂಗ್ರಹಿಸಿ 204 ಮಕ್ಕಳ ಚಿಕಿತ್ಸೆಗೆ ನೆರವು ನೀಡಿದೆ ಎಂದು ತಿಳಿಸಲಾಗಿದ್ದು, ಅವರ ಸಮಾಜಸೇವೆಯನ್ನು ಗುರುತಿಸಿ ‘ಕೌನ್ ಬನೇಗಾ ಕರೋಡ್ಪತಿ’ಯ ‘ಕರ್ಮವೀರ್’ ವಿಶೇಷ ಸಂಚಿಕೆಗೆ ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ದೊರೆತ ಬಹುಮಾನದ ಹಣವನ್ನೂ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ್ದರು. ಅವರ ಸೇವಾ ಕಾರ್ಯಕ್ಕೆ 80ಕ್ಕೂ ಅಧಿಕ ಸ್ವಯಂಸೇವಕರ ತಂಡ ಬೆಂಬಲ ನೀಡುತ್ತಿದೆ.

ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ವತಿಯಿಂದ ರವಿ ಕಟಪಾಡಿ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಸರ್ವೋತ್ತಮ ಶೆಟ್ಟಿಗೆ ಗೌರವ ಸನ್ಮಾನ

ಗಣೇಶೋತ್ಸವದಲ್ಲಿ ಕರ್ನಾಟಕ ಸಂಘ ಅಬುಧಾಬಿಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ವತಿಯಿಂದ ಸರ್ವೋತ್ತಮ ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಯುಎಇಯಲ್ಲಿ ಕನ್ನಡಿಗರನ್ನು ಒಗ್ಗೂಡಿಸುವುದು ಹಾಗೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬೆಳೆಸುವ ನಿಟ್ಟಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಸಂದರ್ಭದಲ್ಲಿ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಭಜನೆ, ಸಂಗೀತ ಮತ್ತು ನೃತ್ಯ ವೈಭವ

ಗಣೇಶೋತ್ಸವದ ಅಂಗವಾಗಿ ಓಂ ಶ್ರೀ ಭಜನಾ ವೃಂದ ಶಾರ್ಜಾ, ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈ, ನಾದ ಸಂಕೀರ್ತನ ಭಜನಾ ತಂಡ ಹಾಗೂ ಮಾರ್ಗದೀಪ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮಗಳು ನಡೆದವು. ಭಕ್ತಿಗೀತೆ ಹಾಗೂ ಭಜನೆಗಳ ಮೂಲಕ ಸಭಾಂಗಣದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಂಗಸಾರಥಿ ಪ್ರತಿಷ್ಠಾನ ಯುಎಇ ವತಿಯಿಂದ ನಿರ್ದೇಶಕ ರಂಗಸಾರಥಿ ವಿಶ್ವನಾಥ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಗೂ ರೂಪಾ ಕಿರಣ್ ಅವರ ನೃತ್ಯ ಸಂಯೋಜನೆಯಲ್ಲಿ ‘ಮುಂಡೇರ್ದಪ್ಪೆ ಉಳ್ಳಾಲ್ತಿ’ ನೃತ್ಯ ರೂಪಕ ಪ್ರದರ್ಶನಗೊಂಡಿತು.

ಸ್ಮೈಲ್ ಕ್ರಿಯೇಷನ್ ದುಬೈ ವತಿಯಿಂದ ಜಸ್ಮಿತಾ ವಿವೇಕ್ ಅವರ ನಿರ್ದೇಶನ ಹಾಗೂ ನೃತ್ಯ ಸಂಯೋಜನೆಯಲ್ಲಿ ‘ಗಣಪತಿ ಮಹಿಮೆ’ ಮತ್ತು ‘ಮಂದಾರ್ತಿ ಮಾತೆ’ ನೃತ್ಯ ರೂಪಕಗಳು ಪ್ರೇಕ್ಷಕರ ಗಮನ ಸೆಳೆದವು. ಸಂಸ್ಕೃತಿ ನೃತ್ಯ ಶಾಲೆಯ ವತಿಯಿಂದ ಶಶಿರೇಖಾ ಅವರ ನಿರ್ದೇಶನದಲ್ಲಿ ‘ನೃತ್ಯ ವೈಭವ’ ಕಾರ್ಯಕ್ರಮ ನಡೆಯಿತು. ವಾಗ್ದೇವಿ ಮ್ಯೂಸಿಕಲ್ ಸ್ಕೂಲ್ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಸಾಧಕರಿಗೆ ಸನ್ಮಾನ

ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಸುಬ್ರಹ್ಮಣ್ಯ ಬಿ.ಕೆ. ಹಾಗೂ ಸಂತೋಷ್ ಶೆಟ್ಟಿ ಪೊಳಿಲ್ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಸಂಪ್ರದಾಯದಂತೆ ಪ್ರತಿವರ್ಷ ನೀಡಲಾಗುವ ದಂಪತಿ ಸನ್ಮಾನವನ್ನು ಈ ಬಾರಿ ರತ್ನಾಕರ ಶೇರಿಗಾರ್ ಹಾಗೂ ಪುಪ್ಪ ರತ್ನಾಕರ್ ಶೇರಿಗಾರ್ ದಂಪತಿಗೆ ನೀಡಿ ಗೌರವಿಸಲಾಯಿತು.

ಎರಡು ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ

ಗಣೇಶೋತ್ಸವದ ಅಂಗವಾಗಿ ವಿಶೇಷ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಯುಎಇಯ ವಿವಿಧ ಭಾಗಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಅಧಿಕ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ನಡೆದ ಅನ್ನಸಂತರ್ಪಣೆಯು ಉತ್ಸವದ ಸೇವಾ ಮನೋಭಾವಕ್ಕೆ ಮೆರುಗು ನೀಡಿತು.

ತಾಯ್ನಾಡಿನಿಂದ ದೂರದಲ್ಲಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ, ಸಂಪ್ರದಾಯ ಹಾಗೂ ದೈವಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಕಳೆದ 12 ವರ್ಷಗಳಿಂದ ಸಾರ್ವಜನಿಕ ಶ್ರೀಗಣೇಶೋತ್ಸವವನ್ನು ಆಯೋಜಿಸುತ್ತಿದೆ. ಈ ಬಾರಿಯ ಉತ್ಸವವೂ ಧಾರ್ಮಿಕ ಆಚರಣೆ, ಭಜನೆ, ಸಂಗೀತ, ನೃತ್ಯ, ಸಮಾಜಸೇವೆ, ಅನ್ನಸಂತರ್ಪಣೆ ಹಾಗೂ ಕನ್ನಡಿಗರ ಒಗ್ಗಟ್ಟಿನ ಸಂಗಮವಾಗಿ ಮೂಡಿಬಂತು.

ಸಂಜೆ ವಿಶೇಷ ಪೂಜೆ ಬಳಿಕ ಭಕ್ತರ ಜಯಘೋಷ, ಭಜನೆ ಹಾಗೂ ವಾದ್ಯಘೋಷಗಳ ನಡುವೆ ಶ್ರೀಗಣೇಶನ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು. ಬಳಿಕ ಶ್ರೀಗಣೇಶನ ವಿಸರ್ಜನೆ ನೆರವೇರಿಸಲಾಯಿತು. ಇದರೊಂದಿಗೆ ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯುಎಇಯ 12ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಭಕ್ತಿ, ಸಂಭ್ರಮ, ಸೇವೆ ಹಾಗೂ ಕನ್ನಡ ಸಂಸ್ಕೃತಿಯ ಸೊಗಡಿನೊಂದಿಗೆ ಸ್ಮರಣೀಯವಾಗಿ ಸಂಪನ್ನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!