115 ದೇಶಗಳ ವಿದ್ಯಾರ್ಥಿಗಳೊಂದಿಗೆ ಜಾಗತಿಕ ಹೆಜ್ಜೆ: ತುಂಬೆ ಮೆಡಿಕಲ್ ಯೂನಿವರ್ಸಿಟಿಗೆ ಮೊದಲ ಪಶುವೈದ್ಯಕೀಯ ಬ್ಯಾಚ್ ಸೇರ್ಪಡೆ

ಅಜ್ಮಾನ್ (ಯುಎಇ), ಸೆ.23: ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) 2026ನೇ ಸಾಲಿನ ವೈಟ್ ಕೋಟ್ ಸಮಾರಂಭದ ಮೂಲಕ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದು, ವಿಶ್ವದ 115 ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ಅಜ್ಮಾನ್‌ನ ತುಂಬೆ ಗ್ರೌಂಡ್ಸ್‌ನಲ್ಲಿ ನಡೆದ ಬೆಳಗ್ಗೆ ಹಾಗೂ ಮಧ್ಯಾಹ್ನದ ಸಮಾರಂಭಗಳಲ್ಲಿ ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ. ಮಂದಾ ವೆಂಕಟ್ರಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನೂತನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಡಾ. ತುಂಬೆ ಮೊಯ್ದೀನ್, “ಗಲ್ಫ್‌ನ ಅಗ್ರಗಣ್ಯ ವಿಶ್ವವಿದ್ಯಾಲಯವಾಗಿದ್ದ ನಾವು, ಇದೀಗ ವಿಶ್ವದ ಅತ್ಯುತ್ತಮ ವೈದ್ಯಕೀಯ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದೇವೆ” ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಪ್ರೊ. ಮಂದಾ ವೆಂಕಟ್ರಮಣ, ವೈಟ್ ಕೋಟ್ ಸಮಾರಂಭವು ಸಾಧನೆಯ ಅಂತ್ಯವಲ್ಲ, ಹೊಸ ಪ್ರಯಾಣದ ಆರಂಭವಾಗಿದೆ ಎಂದು ತಿಳಿಸಿದರು.

“ವೈಟ್ ಕೋಟ್ ಧರಿಸುವುದರಿಂದ ಯಾರೂ ವೈದ್ಯರಾಗುವುದಿಲ್ಲ. ಉತ್ತಮ ಪ್ರಶ್ನೆಗಳನ್ನು ಕೇಳುವ ವರ್ಷಗಳ ಅಭ್ಯಾಸವೇ ನಿಮ್ಮನ್ನು ವೈದ್ಯರನ್ನಾಗಿ ರೂಪಿಸುತ್ತದೆ. ಕುತೂಹಲವನ್ನು ಉಳಿಸಿಕೊಳ್ಳಿ, ನಿಮಗೆ ತಿಳಿದಿಲ್ಲದ ವಿಚಾರಗಳ ಬಗ್ಗೆ ಪ್ರಾಮಾಣಿಕರಾಗಿರಿ ಹಾಗೂ ವಿಜ್ಞಾನಕ್ಕಿಂತ ಮಾನವೀಯತೆ ಸದಾ ಮುಂದಿರಲಿ” ಎಂದು ಅವರು ಹೇಳಿದರು.

ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಫಿಸಿಯೋಥೆರಪಿ, ವೈದ್ಯಕೀಯ ಪ್ರಯೋಗಾಲಯ ವಿಜ್ಞಾನ, ಅನಸ್ತೀಷಿಯಾ ಟೆಕ್ನಾಲಜಿ, ವೈದ್ಯಕೀಯ ಇಮೇಜಿಂಗ್ ವಿಜ್ಞಾನ, ಶ್ರವಣ ಮತ್ತು ವಾಕ್-ಭಾಷಾ ಚಿಕಿತ್ಸಾ ವಿಜ್ಞಾನ, ಆಪ್ಟೋಮೆಟ್ರಿ, ಆರೋಗ್ಯ ನಿರ್ವಹಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಕೃತಕ ಬುದ್ಧಿಮತ್ತೆ ವಿಭಾಗಗಳ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

ಡಾಕ್ಟರ್ ಆಫ್ ಮೆಡಿಸಿನ್, ಗ್ರ್ಯಾಜುಯೇಟ್ ಎಂಟ್ರಿ ಎಂಡಿ, ಬಯೋಮೆಡಿಕಲ್ ಸೈನ್ಸ್ ಮತ್ತು ತುಂಬೆ ಇಂಟರ್‌ನ್ಯಾಷನಲ್ ಪಾತ್‌ವೇ ಕಾರ್ಯಕ್ರಮದ ವಿದ್ಯಾರ್ಥಿಗಳೂ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಜ್ಮಾನ್‌ಗೆ ಪ್ರಯಾಣಿಸಲು ಸಾಧ್ಯವಾಗದ ಕುಟುಂಬಸ್ಥರು ನೇರ ಪ್ರಸಾರದ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

ಜಿಎಂಯುವಿನಲ್ಲಿ ಮೊದಲ ಪಶುವೈದ್ಯಕೀಯ ಬ್ಯಾಚ್

ಜಿಎಂಯುವಿನ ಡಾಕ್ಟರ್ ಆಫ್ ವೆಟರಿನರಿ ಮೆಡಿಸಿನ್ ವಿದ್ಯಾರ್ಥಿಗಳಿಗಾಗಿ ವಿಶೇಷ ವೈಟ್ ಕೋಟ್ ಸಮಾರಂಭವೂ ನಡೆಯಿತು. ಯುಎಇಯಲ್ಲಿ ಈ ರೀತಿಯ ಮೊದಲ ಪಶುವೈದ್ಯಕೀಯ ವೈಟ್ ಕೋಟ್ ಸಮಾರಂಭ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಾರ್ಯಕ್ರಮದಲ್ಲಿ, ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವಾಲಯದ ಪ್ರಾಣಿ ಆರೋಗ್ಯ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ. ಕಲ್ತಮ್ ಅಲಿ ಕಯಾಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವೈಟ್ ಕೋಟ್ ಪ್ರದಾನ ಮಾಡಿದರು. ಡಾ. ತುಂಬೆ ಮೊಯ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತುಂಬೆ ಮೆಡಿಸಿಟಿಯಲ್ಲಿ ಶೀಘ್ರದಲ್ಲೇ ತುಂಬೆ ವೆಟರಿನರಿ ಆಸ್ಪತ್ರೆ ಆರಂಭಗೊಳ್ಳಲಿದೆ. ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯವನ್ನು ಪ್ರತ್ಯೇಕ ಕ್ಷೇತ್ರಗಳಾಗಿ ನೋಡದೆ ಸಮಗ್ರ ವ್ಯವಸ್ಥೆಯಾಗಿ ಪರಿಗಣಿಸುವ ಸಂಸ್ಥೆಯ ದೃಷ್ಟಿಕೋನಕ್ಕೆ ಇದು ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳಲ್ಲಿ ಸಮಗ್ರ ಆರೋಗ್ಯದ ಕುರಿತಾದ ಚಿಂತನೆ ಬೆಳೆಸುವ ಉದ್ದೇಶದಿಂದ ಮಾನವ, ಪ್ರಾಣಿ ಮತ್ತು ಪರಿಸರ ಆರೋಗ್ಯ ಕ್ಷೇತ್ರಗಳನ್ನು ಪರಸ್ಪರ ಸಂಪರ್ಕಿಸುವ ರೀತಿಯಲ್ಲಿ ಶಿಕ್ಷಣ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.

ಮೊದಲ ವರ್ಷದಿಂದಲೇ ಕ್ಲಿನಿಕಲ್ ತರಬೇತಿ

ಜಿಎಂಯು ವಿದ್ಯಾರ್ಥಿಗಳಿಗೆ ಮೊದಲ ವರ್ಷದಿಂದಲೇ ಕ್ಲಿನಿಕಲ್ ಪರಿಸರದಲ್ಲಿ ತರಬೇತಿ ನೀಡಲಾಗುತ್ತದೆ. ಶಿಕ್ಷಣದ ಕೊನೆಯ ಹಂತದವರೆಗೆ ಕಾಯದೆ ಆರಂಭಿಕ ವರ್ಷಗಳಿಂದಲೇ ಪ್ರಾಯೋಗಿಕ ಅನುಭವ ಒದಗಿಸುವುದು ವಿಶ್ವವಿದ್ಯಾಲಯದ ಪ್ರಮುಖ ವೈಶಿಷ್ಟ್ಯವಾಗಿದೆ.

ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್, ತುಂಬೆ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್, ತುಂಬೆ ಲ್ಯಾಬ್ಸ್ ಸೇರಿದಂತೆ ವಿಶಾಲ ತುಂಬೆ ಹೆಲ್ತ್‌ಕೇರ್ ಜಾಲದ ಮೂಲಕ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ, ಸಿಮ್ಯುಲೇಷನ್ ಆಧಾರಿತ ಶಿಕ್ಷಣ ಹಾಗೂ ಸಂಶೋಧನಾ ಮಾರ್ಗದರ್ಶನ ಒದಗಿಸಲಾಗುತ್ತದೆ.

ವೈಟ್ ಕೋಟ್ ಪಡೆದ ವಿದ್ಯಾರ್ಥಿಗಳು ಮುಂದಿನ ಕೆಲವೇ ವಾರಗಳಲ್ಲಿ ಈ ಆರೋಗ್ಯ ಸಂಸ್ಥೆಗಳ ಕ್ಲಿನಿಕಲ್ ವಾತಾವರಣದಲ್ಲಿ ತರಬೇತಿ ಪಡೆಯಲಿದ್ದಾರೆ.

1998ರಲ್ಲಿ ಸ್ಥಾಪನೆ

1998ರಲ್ಲಿ ಅಜ್ಮಾನ್‌ನಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ಈ ಪ್ರದೇಶದ ಪ್ರಮುಖ ಖಾಸಗಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. 115 ದೇಶಗಳ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಹೊಂದಿರುವ ಜಿಎಂಯು, ತುಂಬೆ ಗ್ರೂಪ್‌ನ ಅಂಗಸಂಸ್ಥೆಯಾಗಿದೆ.

ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆರೋಗ್ಯ ವಿಜ್ಞಾನ, ಪಶುವೈದ್ಯಕೀಯ, ಆರೋಗ್ಯ ನಿರ್ವಹಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದೆ.

ತುಂಬೆ ಹೆಲ್ತ್‌ಕೇರ್ ಜಾಲದ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಜಿಎಂಯುವಿಗೆ ಕ್ಲಿನಿಕಲ್ ತರಬೇತಿಗಾಗಿ 3,100 ಹಾಸಿಗೆಗಳ ಸೌಲಭ್ಯ ಲಭ್ಯವಿದೆ. ವಿಶ್ವವಿದ್ಯಾಲಯದ ಕುರಿತು ಹೆಚ್ಚಿನ ಮಾಹಿತಿಗಾಗಿ gmu.ac.ae ಸಂಪರ್ಕಿಸಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!