ತುಳು ಮಾನ್ಯತೆ ಪ್ರಶ್ನಿಸಿದ ಪ್ರತಾಪ್ ಸಿಂಹ ವಿರುದ್ಧ ಪದ್ಮರಾಜ್ ಆಕ್ರೋಶ

ಮಂಗಳೂರು: ತುಳು ಭಾಷೆಗೆ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಮಾನ್ಯತೆ ನೀಡಿರುವುದರಲ್ಲಿ ಏನು ವಿಶೇಷ, ಇದರಿಂದ ಏನು ಲಾಭ ಎಂದು ಪ್ರಶ್ನಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತುಳುನಾಡಿನ ಜನರ ಭಾವನೆಗಳಿಗೆ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಭಾಷೆಗೆ ಮಾನ್ಯತೆ ದೊರಕಬೇಕು ಎಂಬುದು ಹಲವು ವರ್ಷಗಳ ಹೋರಾಟದ ಫಲವಾಗಿದೆ. ವಿವಿಧ ಪಕ್ಷಗಳು ಹಾಗೂ ಸಂಘಟನೆಗಳು ಈ ಹೋರಾಟದಲ್ಲಿ ಭಾಗಿಯಾಗಿದ್ದರೂ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತುಳುವಿಗೆ ಅಧಿಕೃತ ಮಾನ್ಯತೆ ನೀಡಿರುವುದು ಹೆಮ್ಮೆಯ ವಿಚಾರ ಎಂದರು.

ತುಳು ಭಾಷೆಗೆ ಆಡಳಿತಾತ್ಮಕ ಮಾನ್ಯತೆ ದೊರೆತಿರುವುದನ್ನು ಲಾಭ-ನಷ್ಟದ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಇದು ತುಳುನಾಡಿನ ಜನರ ಭಾಷೆ, ಸಂಸ್ಕೃತಿ ಹಾಗೂ ಅಸ್ಮಿತೆಗೆ ದೊರೆತ ಗೌರವವಾಗಿದೆ. ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಗೆ ತುಳುನಾಡಿನ ಜನರ ಕ್ಷಮೆ ಕೇಳಬೇಕು ಎಂದು ಪದ್ಮರಾಜ್ ಆಗ್ರಹಿಸಿದರು.

ಜಿಲ್ಲೆಯ ಪ್ರತಿಪಕ್ಷದ ನಾಯಕರು ಹಾಗೂ ತುಳು ಭಾಷೆಯ ಪರವಾಗಿ ಈ ಹಿಂದೆ ಮಾತನಾಡಿರುವ ಮುಖಂಡರು, ತಮ್ಮದೇ ಪಕ್ಷದ ನಾಯಕನ ಹೇಳಿಕೆ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಅಭಿವೃದ್ಧಿ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ: ಪದ್ಮರಾಜ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿರುವುದರಿಂದ ಬಿಜೆಪಿ ಮುಖಂಡರಿಗೆ ನಿದ್ದೆ ಇಲ್ಲದಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ವ್ಯಂಗ್ಯವಾಡಿದರು.

ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಅಭಿವೃದ್ಧಿಗೆ ಆದ್ಯತೆ ನೀಡಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ರಸ್ತೆ, ಮೂಲಸೌಕರ್ಯ ಹಾಗೂ ಬಂದರು ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಆರ್ಥಿಕ ಇಲಾಖೆ ನೀಡುವ ಸಲಹೆಗಳು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಯಾವುದೇ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿಲ್ಲ ಎಂದರು.

ಕರ್ನಾಟಕಕ್ಕೆ ದೊರೆಯಬೇಕಾದ ತೆರಿಗೆ ಪಾಲಿಗಾಗಿ ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮುಂದೆ ಧ್ವನಿ ಎತ್ತಬೇಕು. ಸಚಿವ ಸಂಪುಟ ಸಭೆಯ ಬಳಿಕ ಬಿಜೆಪಿ ನಡೆಸಿದ ಪ್ರತಿಭಟನೆಗೆ ಆಕ್ಷೇಪವಿಲ್ಲ. ಆದರೆ ಪ್ರತಿಭಟನೆಯಲ್ಲಿ ಬಳಸುವ ಭಾಷೆ ಹಾಗೂ ವರ್ತನೆ ತುಳುನಾಡಿನ ಗೌರವಕ್ಕೆ ಧಕ್ಕೆ ತರಬಾರದು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿದ್ದು, ಹೂಡಿಕೆದಾರರ ಸಮಾವೇಶದ ಮೂಲಕ ಜಿಲ್ಲೆಗೆ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಜನರ ಭಾವನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಬದಲು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಪದ್ಮರಾಜ್ ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!