
ಕಾಸರಗೋಡು :ನಿರಂತರವಾಗಿ ಏರಿಕೆಯಾಗುತ್ತಿರುವ ಇಂಧನ ಬೆಲೆ ಹಾಗೂ ಬಿಡಿಭಾಗಗಳ ದರದಿಂದಾಗಿ ಸಂಕಷ್ಟ ಎದುರಿಸುತ್ತಿರುವ ಆಟೋರಿಕ್ಷಾ ಚಾಲಕರು ಪ್ರಯಾಣ ದರ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಆಟೋ ಪ್ರಯಾಣ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡದ ಹಿನ್ನೆಲೆಯಲ್ಲಿ ಕನಿಷ್ಠ ಪ್ರಯಾಣ ದರವನ್ನು 30 ರೂ.ನಿಂದ 40 ರೂ.ಗೆ ಹಾಗೂ ಪ್ರತಿ ಕಿಲೋಮೀಟರ್ಗೆ 15 ರೂ. ಇರುವ ದರವನ್ನು 18 ರೂ.ಗೆ ಹೆಚ್ಚಿಸಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.

ಸಾಮಾನ್ಯ ಜನರ ಸಾರಿಗೆ ಜತೆಯಾಗಿರುವ ಆಟೋರಿಕ್ಷಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಚಾಲಕರ ಬದುಕು ಮಾತ್ರ ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ. ಪ್ರಸ್ತುತ ಕನಿಷ್ಠ ಪ್ರಯಾಣ ದರ 30 ರೂ. ಹಾಗೂ ಪ್ರತಿ ಕಿಲೋಮೀಟರ್ಗೆ 15 ರೂ. ನಿಗದಿಯಾಗಿದೆ. ಇತ್ತ ಪೆಟ್ರೋಲ್ ಬೆಲೆ, ವಾಹನಗಳ ಬಿಡಿಭಾಗಗಳು, ವಿಮೆ ಸೇರಿದಂತೆ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಆದರೆ ಅದಕ್ಕೆ ಅನುಗುಣವಾಗಿ ಪ್ರಯಾಣ ದರ ಹೆಚ್ಚಳವಾಗದಿರುವುದು ಚಾಲಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ.

ಕಳೆದ ನಾಲ್ಕು ವರ್ಷಗಳಿಂದ ಪ್ರಯಾಣ ದರದಲ್ಲಿ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ. 2002ರಲ್ಲಿ ಕೊನೆಯದಾಗಿ ದರ ಪರಿಷ್ಕರಣೆಯಾಗಿದ್ದು, ನಂತರ ಪೆಟ್ರೋಲ್ ಬೆಲೆಯಲ್ಲಿ ಸುಮಾರು 20 ರೂ. ಹೆಚ್ಚಳವಾಗಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟೋ ಓಡಿಸಿ ಕುಟುಂಬ ನಿರ್ವಹಿಸುವುದೇ ಕಷ್ಟಕರವಾಗಿದ್ದು, ಕನಿಷ್ಠ ದರವನ್ನು 40 ರೂ.ಗೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಡಿಭಾಗಗಳು ಹಾಗೂ ವಿಮೆ ಸೇರಿದಂತೆ ವಾಹನ ನಿರ್ವಹಣೆಯ ಎಲ್ಲ ವೆಚ್ಚಗಳು ಹೆಚ್ಚಾಗಿರುವುದರಿಂದ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಟೋ ಪ್ರಯಾಣ ದರವನ್ನು ಪರಿಷ್ಕರಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.

ದರ ಹೆಚ್ಚಳದ ಕುರಿತು ಅಧ್ಯಯನ ಸಮಿತಿ ರಚಿಸಿ ಎರಡು ಅಥವಾ ಮೂರು ವರ್ಷಗಳ ಕಾಲ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಬದಲು, ಬೆಲೆ ಏರಿಕೆಯ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ತಕ್ಷಣವೇ ಪ್ರಯಾಣ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಈ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಬಗ್ಗೆಯೂ ಸಂಘಟನೆಗಳು ಚಿಂತನೆ ನಡೆಸಿವೆ.

