ಮಂಗಳೂರು, ಸೆ.26: ಕರಾವಳಿಯ ವಿಶಿಷ್ಟ ಹುಲಿವೇಷ ಪರಂಪರೆಯ ಇತಿಹಾಸ, ಸಾಂಸ್ಕೃತಿಕ ಮಹತ್ವ ಹಾಗೂ ಈ ಕಲೆಯನ್ನು ಜೀವಂತವಾಗಿರಿಸಿರುವ ಕಲಾವಿದರ ಬದುಕನ್ನು ಪರಿಚಯಿಸುವ ‘ಎಂಕ್ಲೆನ ಪಿಲಿ’ (ನಮ್ಮ ಹುಲಿ) ಸಾಕ್ಷ್ಯಚಿತ್ರವು ಶನಿವಾರ ಮಂಗಳೂರಿನ ಭಾರತ್ ಸಿನೆಮಾಸ್‌ನಲ್ಲಿ ಬಿಡುಗಡೆಯಾಯಿತು.

ಹುಲಿವೇಷದ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಕಲಾವಿದರ ಬದುಕಿನ ವಿವಿಧ ಆಯಾಮಗಳನ್ನು ದಾಖಲಿಸಿರುವ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನಕ್ಕೆ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು, ಕಲಾವಿದರು, ಸಹಯೋಗಿಗಳು, ಸ್ನೇಹಿತರು ಹಾಗೂ ಕುಟುಂಬಸ್ಥರು ಸಾಕ್ಷಿಯಾದರು.

ಕರ್ನಾಟಕ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ದೀಪ ಪ್ರಜ್ವಲಿಸುವ ಮೂಲಕ ಸಾಕ್ಷ್ಯಚಿತ್ರವನ್ನು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ತುಳುನಾಡಿನ ಹುಲಿವೇಷ ಪರಂಪರೆಯ ದಂತಕಥೆ,ಖ್ಯಾತ ಹಿರಿಯ ಪಿಲಿವೇಷದಾರಿ ಹಾಗೂ ಮಾಜಿ ಕಾರ್ಪೊರೇಟರ್ ಬಜಿಲಕೇರಿ ಕಮಲಾಕ್ಷ*, ಉದ್ಯಮಿ ಹಾಗೂ ಕೃಷಿಕ **ವಿಜಿ ಸಜ್ಜು, ವನ್ಯಜೀವಿ ಛಾಯಾಗ್ರಾಹಕ **ಹರ್ಷನ್ ನರಸಿಂಹ ಮೂರ್ತಿ, ಕಾಂಗ್ರೆಸ್‌ನ ಹಿರಿಯ ನಾಯಕಿ **ಗೀತಾ, ಚಿತ್ರದ ನಿರ್ಮಾಪಕ **ಶ್ರೀಕಾಂತ್ ಕಾಮತ್, ನಿರ್ದೇಶಕ *ಶ್ರೀಜಿತ್ ಕಾಮತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


