ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ: ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನೋಟಿಸ್ ನೀಡಿರುವ ವಿಚಾರಕ್ಕೆ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ ನೀಡಿರುವ ನೋಟಿಸ್‌ ಕುರಿತು ಪ್ರತಿಕ್ರಿಯಿಸಿರುವ ಅವರು, “ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ” ಎಂದು ಕಿಡಿಕಾರಿದ್ದಾರೆ.

ನನ್ನ ವಿರುದ್ಧ ಈಗಾಗಲೇ 110 ಪ್ರಕರಣಗಳಿವೆ. ಇದ್ಯಾವ ಲೆಕ್ಕ ಎಂದು ಪ್ರಶ್ನಿಸಿರುವ ಡಾ. ಕಲ್ಲಡ್ಕ ಪ್ರಭಾಕರ ಭಟ್, ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಅಡಿಯಲ್ಲಿ ಫೋನ್ ಮೂಲಕ ಮಾತನಾಡಿದ್ದೇನೆ. ನಾನು ಫೋನ್ ಮಾಡಿ ಮಾತನಾಡಿದ್ದು ಹೌದು. ಆದರೆ ಯಾರನ್ನಾದರೂ ಕೊಲೆ ಮಾಡಿ ಎಂದು ಮಾತನಾಡಿದ್ದೇನೆಯೇ ಎಂದು ಪ್ರಶ್ನಿಸಿದರು.

ನಾನು ಮಾತನಾಡಿರುವ ಸಂಪೂರ್ಣ ಸಂಭಾಷಣೆಯ ರೆಕಾರ್ಡ್ ಪೊಲೀಸರ ಬಳಿ ಇದೆ. ಅದರಲ್ಲಿ ಏನಿದೆ ಎಂಬುದು ಅವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ನಾನು ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಲು ಅವರಿಗೇನು ಅಧಿಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನಗೆ ವಿಚಾರಣೆಗೆ ಹಾಜರಾಗಲು ಸಮಯ ನಿಗದಿಪಡಿಸುವವರು ಯಾರು ಎಂದು ಪ್ರಶ್ನಿಸಿದರು.

ಹತ್ಯೆಯನ್ನು ಯಾರೂ ಸಮರ್ಥಿಸುವುದಿಲ್ಲ. ಆದರೆ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗದವರ ಮೇಲೂ ಕೇಸ್ ದಾಖಲಿಸಲಾಗಿದೆ ಎಂದು ಡಾ. ಕಲ್ಲಡ್ಕ ಪ್ರಭಾಕರ ಭಟ್ ಆರೋಪಿಸಿದರು. ಕಾನೂನು ಪ್ರಕ್ರಿಯೆಯನ್ನು ಬದಿಗೊತ್ತಿ ಕೇವಲ ಗೃಹ ಸಚಿವರು ಅಥವಾ ಮುಖ್ಯಮಂತ್ರಿಗಳು ಹೇಳುತ್ತಾರೆ ಎಂಬ ಕಾರಣಕ್ಕೆ ನಮ್ಮ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದರು.

ಅಧಿಕಾರಿಗಳು ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಅವರ ಬೆಂಬಲಿಗರಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದರು. ಅಧಿಕಾರಿಗಳ ಈ ರೀತಿಯ ಕಾರ್ಯವೈಖರಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.

ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ನೋಟಿಸ್‌ ಹಾಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಕ್ರಮದ ಕುರಿತು ತಮ್ಮ ನಿಲುವನ್ನು ಕಲ್ಲಡ್ಕ ಪ್ರಭಾಕರ ಭಟ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪ್ರಕರಣದ ವಾಸ್ತವಾಂಶಗಳನ್ನು ಪರಿಶೀಲಿಸದೆ, ರಾಜಕೀಯ ಒತ್ತಡದ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!