ಮಂಜೇಶ್ವರ: ಜಿಲ್ಲೆಯಲ್ಲಿ ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುವ ಉದ್ದೇಶದೊಂದಿಗೆ ಮಂಜೇಶ್ವರ ಗ್ರಾಮ ಪಂಚಾಯತ್ ಆಡಳಿತವು ಆಯೋಜಿಸಿದ್ದ ವಿಶೇಷ ‘ಮಹಿಳಾ ರೋಗನಿರ್ಣಯ ವೈದ್ಯಕೀಯ ಶಿಬಿರ’ವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಕ್ಷೇಮವನ್ನು ಪ್ರಮುಖ ಆದ್ಯತೆಯನ್ನಾಗಿಸಿಕೊಂಡಿರುವ ಪಂಚಾಯತ್ ಆಡಳಿತವು, ಹದಿನಾಲ್ಕನೇ ಪಂಚವಾರ್ಷಿಕ ಯೋಜನೆ 2022–2027 ಹಾಗೂ 2026–27ನೇ ಸಾಲಿನ ವಾರ್ಷಿಕ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.


ಮಂಜೇಶ್ವರದ ಗಿಳಿವಿಂಡುನಲ್ಲಿ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ಶಿಬಿರಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಚಾಲನೆ ನೀಡಿದರು.( byt1) ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಗಮನ ಕೊಡಬೇಕಾಗಿದೆ. 6 ತಿಂಗಳಿಗೊಮ್ಮೆಯಾದರೂ ಆರೋಗ್ಯದ ತಪಾಸಣೆಯನ್ನು ನಡೆಸಿ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕಾಗಿದೆ ಎಂದು ಹೇಳಿ ಶಿಬಿರಕ್ಕೆ ಶುಭ ಹಾರೈಸಿದರು.
ಬಳಿಕ ಅಧ್ಯಕ್ಷತೆ ವಹಿಸಿದ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ರವರು ಮಾತನಾಡಿ (Byt 2) : ನಾವು ಸಣ್ಣವರಿದ್ದಾಗ ಈಗಿನ ರೀತಿಯ ಫಾಸ್ಟ್ ಫುಡ್ಗಳೇ ಇರಲಿಲ್ಲ. ಆದರೆ ಇಂದು ಎಲ್ಲೆಂದರಲ್ಲಿ ಅಣಬೆಗಳಂತೆ ತಲೆ ಎತ್ತಿರುವ ಫಾಸ್ಟ್ ಫುಡ್ಗಳಿಗೆ ನಮ್ಮ ಯುವಕ-ಯುವತಿಯರು ಮಾರುಹೋಗಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ, ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ಉಲ್ಬಣಗೊಳ್ಳುತ್ತಿವೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಎಂದು ಹೇಳಿ ಬಂದವರೆಲ್ಲರಿಗೂ ಶುಭ ಹಾರೈಸಿದರು.

ಬಳಿಕ ಬಿ.ಎಫ್.ಹೆಚ್.ಸಿ. ಮಂಜೇಶ್ವರದ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಯವರು ಮಾತನಾಡಿ (Byt 3) : ಮಹಿಳೆಯರ ಆರೋಗ್ಯಕ್ಕೆ ಪಂಚಾಯತ್ ವತಿಯಿಂದ ಉತ್ತಮ ಪ್ರಾಧಾನ್ಯತೆ ನೀಡಿ ಇಂತಹ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಮಹಿಳೆಯರಲ್ಲಿ ಈ ರೋಗಗಳ ಬಗ್ಗೆ ಸರಿಯಾದ ಅರಿವು ಮತ್ತು ಜಾಗೃತಿ ಮೂಡುವುದು ಅತ್ಯಗತ್ಯವಾಗಿದೆ ಎಂದು ಹೇಳಿ ಆಗಮಿಸಿದವರೆಲ್ಲರನ್ನು ಸ್ವಾಗತಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ, ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರುಗಳು, ವಿವಿಧ ಜನಪ್ರತಿನಿಧಿಗಳು, ಸಂಘಟನಾ ಕಾರ್ಯಕರ್ತರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ಬಿ.ಎಫ್.ಹೆಚ್.ಸಿ. ಮಂಜೇಶ್ವರ ಸಹಯೋಗದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ, ಮಹಿಳೆಯರನ್ನು ಬಾಧಿಸುವ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳನ್ನು ಆರಂಭದಲ್ಲೇ ಗುರುತಿಸುವ ನಿಟ್ಟಿನಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸಾ ಮಾರ್ಗಸೂಚಿಗಳನ್ನು ನೀಡಲಾಯಿತು. ಶಿಬಿರದಲ್ಲಿ ಪ್ಯಾಪ್ ಸ್ಮೀಯರ್ ಪರೀಕ್ಷೆ , ಎಫ್.ಎನ್.ಎ.ಸಿ. ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ಸೇರಿದಂತೆ ವಿವಿಧ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಲಾಯಿತು.

ಗ್ರಾಮೀಣ ಭಾಗದ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೇರವಾಗಿ ತಲುಪಿಸುವಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅವರ ಕಾರ್ಯವೈಖರಿ ಮತ್ತು ಜನಪರ ಕಾಳಜಿ ಸಾರ್ವಜನಿಕರ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸಮಾಜದ ಪ್ರತಿಯೊಬ್ಬ ಮಹಿಳೆಯೂ ಆರೋಗ್ಯ ತಪಾಸಣೆಯ ಸದುಪಯೋಗ ಪಡೆಯುವಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಕಲ್ಪಿಸಿದ ಅಧ್ಯಕ್ಷರ ದೂರದೃಷ್ಟಿ ಮತ್ತು ನಾಯಕತ್ವವನ್ನು ಸ್ಥಳೀಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಇದರೊಂದಿಗೆ, ಬಿ.ಎಫ್.ಹೆಚ್.ಸಿ. ಮಂಜೇಶ್ವರದ ವೈದ್ಯಾಧಿಕಾರಿ ಡಾ. ಪ್ರಭಾಕರ ರೈ ಅವರ ಸಹಕಾರದೊಂದಿಗೆ ಪಂಚಾಯತ್ ಆಡಳಿತವು ತೋರಿದ ಸಮನ್ವಯ ಮತ್ತು ಜನಸೇವಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಾರ್ವಜನಿಕ ಆರೋಗ್ಯದ ಕಾಳಜಿಯೊಂದಿಗೆ ಕೈಗೊಂಡ ಈ ಉಪಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ತಪಾಸಣಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತಪಡಿಸಿದರು.
ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ಪ್ರಯೋಜನ ಪಡಕೊಂಡರು.

